More

    ಕಿಡಿಗೇರಿಗಳ ಬಂಧನಕ್ಕೆ ಆಗ್ರಹ

    ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯ ವತಿಯಿಂದ ನಡೆಯುವ ಅಂಧಕಾಸುರ ವಧೆ ಕಾರ್ಯಕ್ರಮ ವೇಳೆ ತಾಂಡವೇಶ್ವರ ಹಾಗೂ ಪಾರ್ವತಿದೇವಿ ಉತ್ಸವಮೂರ್ತಿಗಳಿಗೆ ಎಂಜಲು ನೀರು ಎರಚಿ ಧಾರ್ಮಿಕ ಅಡ್ಡಿಪಡಿಸಿದ್ದಲ್ಲದೇ, ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶ್ರೀಕಂಠೇಶ್ವರಸ್ವಾಮಿ ಭಕ್ತ ಮಂಡಳಿ ವತಿಯಿಂದ ಗುರುವಾರ ಸಹಿ ಸಂಗ್ರಹ ಅಭಿಯಾನ ಹಾಗೂ ಪ್ರತಿಭಟನೆ ನಡೆಯಿತು.

    ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂದೆ ಸಮಾವೇಶಗೊಂಡ ನೂರಾರು ಭಕ್ತರು ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಇನ್ನು ಬೃಹತ್ ಫ್ಲೆಕ್ಸ್‌ನಲ್ಲಿ ಸಹಿ ಸಂಗ್ರಹ ಅಭಿಮಾನ ಕೈಗೊಂಡ ವೇಳೆ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರು ಈ ಕೃತ್ಯವನ್ನು ಖಂಡಿಸಿ ಸಹಿ ಹಾಕುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಿದರು. ದೇವಾಲಯದ ಅರ್ಚಕರು, ಆಗಮಿಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಇನ್ನು ರಥಬೀದಿಯಲ್ಲಿನ ಎಲ್ಲಾ ವರ್ತಕರು, ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

    ಪೊಲೀಸರ ವೈಫಲ್ಯ ಆರೋಪ: ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಅಂಧಕಾಸುರನ ವಧೆ ಕಾರ್ಯಕ್ರಮ ಮಂಗಳವಾರ ಸಂಜೆ ನಿಗದಿಯಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಕೆಲವರು ಈ ಕಾರ್ಯವನ್ನು ತಡೆಯಲು ಸಂಚು ರೂಪಿಸಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪೊಲೀಸ್ ಇಲಾಖೆಗೂ ಈ ವಿಚಾರ ತಿಳಿದಿತ್ತು. ಆದರೂ ಅವರನ್ನು ವಶಕ್ಕೆ ಪಡೆದು ಅಂಧಕಾಸುರನ ವಧೆ ಕಾರ್ಯವನ್ನು ಸುಸೂತ್ರವಾಗಿ ನೆರವೇರುವಂತೆ ಮಾಡುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪ್ರತಿಭಟನಕಾರರು ಆಪಾದಿಸಿದರು.

    ದೇವಾಲಯ ವತಿಯಿಂದ ನಡೆಯುವ ಈ ಧಾರ್ಮಿಕ ಕಾರ್ಯ ಸರ್ಕಾರಿ ಕಾರ್ಯಕ್ರಮವಾಗಿರುತ್ತದೆ. ಇದಕ್ಕೆ ಸೂಕ್ತ ಬಂದೋಬಸ್ತ್ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿತ್ತು. ಅಂಧಕಾಸುರನ ವಧೆ ತಡೆಯಲು ಸ್ಥಳಕ್ಕೆ ಬಂದಿದ್ದ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದು ಕಾರ್ಯಕ್ರಮ ಸುಗಮವಾಗಿ ನೆರವೇರಲು ನೆರವಾಗಬಹುದಿತ್ತು. ಪಲ್ಲಕ್ಕಿಯಲ್ಲಿ ತಾಂಡವೇಶ್ವರ ಹಾಗೂ ಪಾರ್ವತಿದೇವಿ ಉತ್ಸವ ಮೂರ್ತಿ ಹೊತ್ತು ತಂದ ಸಂದರ್ಭದಲ್ಲಿ ಕಿಡಿಗೇಡಿಗಳು ಬಾಟಲಿನಲ್ಲಿ ಎಂಜಲು ಮಾಡಿದ್ದ ನೀರನ್ನು ಉತ್ಸವಮೂರ್ತಿಗಳಿಗೆ ಎರಚುವ ಮೂಲಕ ವಿಕೃತಿ ಮರೆದಿದ್ದಾರೆ. ಸ್ಥಳದಲ್ಲೇ ಇದ್ದ ಅಸಂಖ್ಯಾತ ಶ್ರೀಕಂಠೇಶ್ವರ ಭಕ್ತರ ಭಾವನೆಯನ್ನು ಕೆರಳಿಸಿದರಲ್ಲದೇ, ಧಾರ್ಮಿಕ ಕಾರ್ಯಕ್ಕೆ ಧಕ್ಕೆ ತಂದರು. ಕಿಡಿಗೇಡಿಗಳು ಎಸಗಿರುವ ದುಸ್ಕೃತ್ಯದ ಬಗ್ಗೆ ವಿಡಿಯೋ ರೆಕಾರ್ಡ್‌ಗಳು ಲಭ್ಯ ಇವೆ. ಆದರೆ, ಕಿಡಿಗೇಡಿಗಳನ್ನು ಬಂಧಿಸಲು ಮುಂದಾಗದ ಪೊಲೀಸರು, ಭಕ್ತರ ವಿರುದ್ಧವೇ ದೂರು ದಾಖಲಿಸಿ ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಹುನ್ನಾರ ನಡೆದಿದೆ ಎಂದು ಆಕ್ರೋಶ ಹೊರಹಾಕಿದರು.

    ಹೋರಾಟದ ಎಚ್ಚರಿಕೆ: ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದ್ದಂತೆ ಅಹೋರಾತ್ರಿ ಧರಣಿ ನಡೆಸಿ 24 ಗಂಟೆಯೊಳಗೆ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಎರಡು ದಿನ ಕಳೆದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಹೀಗಾಗಿ ಭಕ್ತ ಮಂಡಳಿಯಿಂದ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿ ಅಹವಾಲು ಆಲಿಸುವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

    ಉಪವಿಭಾಗಾಧಿಕಾರಿ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ರಕ್ಷಿತ್ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಚುನಾವಣಾ ಸಂಬಂಧಿಸಿದಂತೆ ದೆಹಲಿಗೆ ತೆರಳಿದ್ದಾರೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೂಡ ವಿಡಿಯೋ ತುಣುಕುಗಳನ್ನು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸಾಕ್ಷ್ಯ ಸಂಗ್ರಹಿಸಿ ಕ್ರಮ ಕೈಗೊಳ್ಳಲಿದ್ದಾರೆ. ನಿಮ್ಮ ಅಹವಾಲನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಸಾಕ್ಷೃಗಳಿಲ್ಲದೆ ಬಂಧಿಸಲಾಗದು: ಈ ವೇಳೆ ಮಾತನಾಡಿದ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ನಂದಿನಿ, ಕಾನೂನಿನಲ್ಲಿ ಕೆಲವು ಇತಿಮಿತಿಗಳಿವೆ. ದಾಖಲಾತಿಗಳನ್ನು ಪರಿಶೀಲನೆ ನಡೆಸಿ ತನಿಖೆ ಕೈಗೊಂಡು ಕಾನೂನಿನಡಿ ಅವಕಾಶವಿದ್ದರೆ ದಸ್ತಗಿರಿ ಮಾಡಿ ಖಂಡಿತ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೌಖಿಕವಾಗಿ ಹೇಳುವುದಕ್ಕೂ, ದಾಖಲಾತಿ ಹೇಳುವುದಕ್ಕೂ ವ್ಯತ್ಯಾಸವಿದೆ. ಸೂಕ್ತ ಸಾಕ್ಷ್ಯಗಳಿಲ್ಲದೇ ನಾವು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಹಾಗಾಗಿ ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳುವುದಾಗಿ ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಕಾರರು, ಈಗ ಅಂಧಕಾಸುರ ವಧೆಗೆ ಅಡ್ಡಿಪಡಿಸಿರುವವರು ಮುಂದೆ ದೊಡ್ಡಜಾತ್ರೆ ಸಂದರ್ಭದಲ್ಲೂ ಖ್ಯಾತೆ ತೆಗೆಯುವ ಸಾಧ್ಯತೆ ಇರುವುದರಿಂದ ಭಕ್ತರ ಭಾವನೆಗಳಿಗೂ ಧಕ್ಕೆಯಾಗಲಿದೆ. ಈಗಲೇ ಅಂತವರ ವಿರುದ್ಧ ಕ್ರಮ ಕೈಗೊಳ್ಳಿ. ತಪ್ಪಿತಸ್ಥರನ್ನು ಬಂಧಿಸಿದಿದ್ದರೆ ಮುಂದಿನ ದಿನಗಳಲ್ಲಿ ನಂಜನಗೂಡು ಬಂದ್ ಆಚರಿಸಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಭಕ್ತ ಮಂಡಳಿಯ ಗಿರೀಶ್, ಎನ್.ಜೆ.ಸುನೀಲ್, ಜಯಕುಮಾರ್, ಅರ್ಜುನ್, ನಿತಿನ್, ರವಿ, ಕಿರಣ್, ಮಹದೇವಪ್ರಸಾದ್, ಅನಂತ್, ಆನಂದ್ ಬಿ.ನಾಯರ್, ರವಿಶಾಸ್ತ್ರಿ, ಉಮೇಶ್ ಮೋದಿ ಮತ್ತಿತರರಿದ್ದರು.

    ಪೊಲೀಸರ ವಾಗ್ವಾದ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಡಾ.ನಂದಿನಿ ಅವರೊಂದಿಗೆ ಭಕ್ತರು ಪೊಲೀಸರ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದಂತೆ ಡಿವೈಎಸ್ಪಿ ಗೋವಿಂದರಾಜು ಭಕ್ತರೊಂದಿಗೆ ವಾಗ್ವಾದಕ್ಕಿಳಿದರು. ಹೊಡಿತೀರೇನೋ ಹೊಡಿಯೋ ನೋಡೋಣ ಎಂದು ಪ್ರತಿಭಟನಕಾರರನ್ನೇ ಕೆರಳುವಂತೆ ವರ್ತಿಸಿದರು. ಈ ವೇಳೆ ಪೊಲೀಸರು ಕೂಡ ಪ್ರತಿಭಟನಕಾರರ ಮೇಲೆ ಹರಿಹಾಯ್ದರು. ಇದರಿಂದ ಕೆಲಕ್ಷಣ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ನಮ್ಮನ್ನು ಕೆರಳುವಂತೆ ಮಾಡಿ ಕಾನೂನು ಉಲ್ಲಂಘನೆ ಆಪಾದನೆಯಲ್ಲಿ ಬಂಧಿಸುವ ಹುನ್ನಾರದಿಂದ ನಮ್ಮನ್ನು ಪ್ರಚೋದಿಸಿದರು ಎಂದು ಭಕ್ತರು ಆಪಾದಿಸಿದ್ದಾರೆ. ಪೊಲೀಸರನ್ನು ನಮ್ಮೊಳಗಿನ ಯೋಧರು ಎಂಬುದಾಗಿ ಭಾವಿಸಿದ್ದೇವೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಅದಕ್ಕೆ ಮಾತ್ರ ನಾವು ನ್ಯಾಯ ಕೇಳುತ್ತಿದ್ದೇವೆ. ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸುವ ಅಗತ್ಯ ನಮಗಿಲ್ಲ ಎಂದು ಭಕ್ತರು ಪೊಲೀಸರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts