More

    ಮೇವು ಸರಬರಾಜು ನಿರ್ಬಂಧ ತೆರವಿಗೆ ಆಗ್ರಹ

    ಗುಂಡ್ಲುಪೇಟೆ : ಅಂತರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮೇವು ಸರಬರಾಜು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಕೇರಳದ ಎಲ್‌ಡಿಎಫ್‌ಜೆಡಿಎಸ್ ಸೇರಿದಂತೆ ಇತರ ಪಕ್ಷಗಳ ಸದಸ್ಯರು ಮಂಗಳವಾರ ಗುಂಡ್ಲುಪೇಟೆ ಗಡಿಭಾಗದವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಿದರು.

    ಈ ಮೊದಲು ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ನಂಜನಗೂಡು ಕಡೆಯಿಂದ ಮೂಲೆಹೊಳೆ ಚೆಕ್‌ಪೋಸ್ಟ್ ಮಾರ್ಗವಾಗಿ ಕೇರಳಕ್ಕೆ ಪ್ರತಿ ದಿನವೂ ನೂರಾರು ಟನ್ ಮುಸುಕಿನ ಜೋಳದ ಕಡ್ಡಿ ಸಾಗಣೆಯಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದ ಬಳಿಕ ಜಿಲ್ಲಾಡಳಿತ ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ನೆರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮೇವು ಸಾಗಣೆ ನಿರ್ಬಂಧಿಸಿ ಅಕ್ಟೋಬರ್ 12ರಂದು ಆದೇಶ ಹೊರಡಿಸಿತ್ತು. ಚೆಕ್‌ಪೋಸ್ಟ್‌ಗಳಲ್ಲಿ ಮೇವು ಸಾಗಣೆ ಪರಿಶೀಲನೆಗೆ ಸಿಬ್ಬಂದಿಯನ್ನು ನಿಯೋಜಿಸಿತ್ತು. ಇದರಿಂದ ಕೇರಳಕ್ಕೆ ಮೇವು ಸರಬರಾಜು ಸ್ಥಗಿತಗೊಂಡಿತು.

    ಈ ಹಿನ್ನೆಲೆಯಲ್ಲಿ ಕಳೆದ ವಾರ ಸುಲ್ತಾನ್ ಭತ್ತೇರಿಯ ಕಾಂಗ್ರೆಸ್ ಶಾಸಕ ಐ.ಸಿ.ಬಾಲಕೃಷ್ಣನ್ ಕೇರಳಕ್ಕೆ ಮೇವು ಪೂರೈಸಲು ಅವಕಾಶ ನೀಡುವಂತೆ ಗುಂಡ್ಲುಪೇಟೆ ಶಾಸಕ ಗಣೇಶಪ್ರಸಾದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ವೈನಾಡು ಜಿಲ್ಲೆಯ ಪೋಂಕುಳಿಯಿಂದ ಮೂಲೆಹೊಳೆ ಚೆಕ್‌ಪೋಸ್ಟ್‌ವರೆಗೆ ಕೇರಳದವರು ಪಾದಯಾತ್ರೆ ನಡೆಸಿ ನಿರ್ಬಂಧ ತೆರವುಗೊಳಿಸಿ ಮೇವು ಸಾಗಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಸ್ಥಿಕೆ ವಹಿಸಿ ಚಾಮರಾಜನಗರ ಜಿಲ್ಲಾಡಳಿತ ಮೇವು ಸರಬರಾಜಿಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು. ಇದಕ್ಕೆ ಸಂಬಂಧಪಟ್ಟ ಸಚಿವರು ಹಾಗೂ ಶಾಸಕರ ಜತೆ ಮಾತನಾಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಡಿವೈಎಸ್‌ಪಿ ಲಕ್ಷ್ಮಯ್ಯ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts