More

    ಗ್ರಾಮೀಣ ರಸ್ತೆಗಳ ಸುಧಾರಣೆಗೆ ಆಗ್ರಹ

    ಲಕ್ಷ್ಮೇಶ್ವರ: ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಆಗ್ರಹಿಸಿ ತಾಲೂಕಿನ ಬಾಲೇಹೊಸೂರ ಗ್ರಾಮದ ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಸಮಿತಿ ಅಧ್ಯಕ್ಷ ಬಸವರಡ್ಡಿ ಹನುಮರಡ್ಡಿ ಮಾತನಾಡಿ, ಬಾಲೇಹೊಸೂರಿನಿಂದ ಸೂರಣಗಿ, ಹಾಲಗಿ, ತಂಗೋಡ, ಇಚ್ಚಂಗಿ ಮಾದಾಪುರ ಸಂಪರ್ಕಿಸುವ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದು, ಯಾವುದೇ ವಾಹನಗಳು ಓಡಾಡಲಾಗದಷ್ಟರ ಮಟ್ಟಿಗೆ ಹದಗೆಟ್ಟು ಹೋಗಿವೆ. ಬಾಲೇಹೊಸೂರ ಮಾರ್ಗವಾಗಿ ಗುತ್ತಲ, ರಾಣೆಬೆನ್ನೂರ ಹಾಗೂ ಹಾವೇರಿ ತಾಲೂಕಿನ ಸುಮಾರು ಹಳ್ಳಿಗಳಿಂದ ಲಕ್ಷೇಶ್ವರಕ್ಕೆ ನಿತ್ಯ ವ್ಯಾಪಾರ, ಶಿಕ್ಷಣ, ಉದ್ಯೋಗ,ಆಸ್ಪತ್ರೆ ಅನೇಕ ಕೆಲಸ ಕಾರ್ಯಗಳಿಗೆ ಬಂದು ಹೋಗುತ್ತಾರೆ.ರಸ್ತೆಯುದ್ದಕ್ಕೂ ಆಳವಾದ ತಗ್ಗು ಗುಂಡಿಗಳು ಬಿದ್ದು ಬೈಕ್, ಕಾರು, ಬಸ್, ಟ್ರ್ಯಾಕ್ಟರ್ ಮತ್ತು ಚಕ್ಕಡಿಗಳು ಸಂಚರಿಸದಂತಾಗಿವೆ. ನಿತ್ಯ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಭಯದ ವಾತಾವರಣದಲ್ಲಿ ಪ್ರಯಾಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

    ತಾಪಂ ಮಾಜಿ ಸದಸ್ಯ ನಿಂಗಪ್ಪ ಜಾಲವಾಡಗಿ ಮಾತನಾಡಿ, ಮುಖ್ಯ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿರುವ ಕಾರಣ ಸರಿಯಾಗಿ ಬಸ್‌ಗಳು ಬರುತ್ತಿಲ್ಲ. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ದಿನವು ತೊಂದರೆ ತಪ್ಪಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. 15 ದಿನಗಳೊಳಗಾಗಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳದಿದ್ದರೆ ಬಾಲೇಹೊಸೂರ ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮದ ನಾಗರಿಕರು ಅ. 10 ರಿಂದ ರಸ್ತೆ ದುರಸ್ತಿ ಕಾಮಗಾರಿ ಆರಂಭವಾಗುವವರೆಗೂ ಬಾಲೇಹೊಸೂರಿನಲ್ಲಿ ಸಂಪೂರ್ಣ ವಾಹನ ಸಂಚಾರ ಬಂದ್ ಮಾಡಿ, ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

    ತಹಸೀಲ್ದಾರ್ ಕಚೇರಿ ಶಿರಸ್ತೇದಾರ ರೇಣುಕಾ ಹರಿಜನ ಮನವಿ ಸ್ವೀಕರಿಸಿದರು. ಶ್ಯಾಮಣ್ಣ ಕಡೇಮನಿ, ಮಹಾಂತೇಶ ಈರಗಾರ ಫಕ್ಕೀರಯ್ಯ ಹಿರೇಮಠ, ಹನುಮಂತಪ್ಪ ಸವಣೂರು, ಭರತರಾಜ ಗುಡಗೇರಿ, ಬಸವರಾಜ ಅರಳಿ, ಜಗದೀಶ ಜೊಗೇರ, ಸದ್ದಾಂ ಹಾಲಗಿ, ಕರಿಯಪ್ಪ ಸಾಂದ್ಲಿ, ರಾಜು ಬೆಂಚಳ್ಳಿ ಹಾಗೂ ಗ್ರಾಮದ ಹಿರಿಯರು, ಮುಖಂಡರು ಮತ್ತು ಯುವಕರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts