More

    ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹ

    ಶಿರಸಿ: ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಆಗ್ರಹಿಸಿದರು.

    ಇಲ್ಲಿನ ಸ್ಕೊಡ್‌ವೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಪರಿಸರ, ಅರಣ್ಯ, ಸಮುದ್ರ ಸಂಪನ್ಮೂಲಗಳು, ಸಮುದ್ರ ಅವಲಂಬಿತ ಕುಟುಂಬಗಳು, ಬುಡಕಟ್ಟುಗಳು, ಅರಣ್ಯ ಅವಲಂಬಿತ ಸಮುದಾಯದ ಕುರಿತು ಸಮಗ್ರ ಅಧ್ಯಯನ ನಡೆಯಬೇಕಿದೆ. ಅವುಗಳನ್ನು ಒಟ್ಟಾರೆ ಬೋಧಿಸಲು, ತನ್ಮೂಲಕ ಮಾನವ ಸಂಪನ್ಮೂಲ ರೂಪಿಸಲು ಒಂದು ವಿಶಿಷ್ಟ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ.

    ಇಂತಹ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲಗಳನ್ನು ರೂಪಿಸುವುದರ ಜತೆಗೆ ಉತ್ಕೃಷ್ಟ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ ಎಂದರು.

    ಪರಿಸರದ ಅಧ್ಯಯನ ಸೇರಿದಂತೆ ಹಲವು ವಿಷಯಗಳ ಅಧ್ಯಯನಕ್ಕೆ ಶಿರಸಿ ನಗರವು ಅತ್ಯಂತ ಪ್ರಶಸ್ತವಾದ ಸ್ಥಳವಾಗಿದೆ. ಇಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಬೇಕಾಗುವ ಮೂಲಸೌಕರ್ಯಗಳ ಜತೆಗೆ ಅರಣ್ಯ ಮತ್ತು ಸಮುದ್ರ ತೀರಕ್ಕೆ ಸನಿಹದಲ್ಲಿದ್ದು, ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ. ಈಗಾಗಲೇ ಶಿರಸಿಯು ಪರಿಸರ ವಿಷಯದಲ್ಲಿ ದೇಶದಲ್ಲಿಯೇ ಗುರುತಿಸಿಕೊಂಡ ಸ್ಥಳವಾಗಿರುವುದರಿಂದ ಬಹುಶಿಸ್ತೀಯ ಏಕರೂಪ ಅಧ್ಯಯನ ನಿಕಾಯಗಳನ್ನು ಒಳಗೊಂಡ ವಿಶ್ವವಿದ್ಯಾಲಯ ಸ್ಥಾಪನೆಗೆ ಸೂಕ್ತವಾದ ಸ್ಥಳವಾಗಿದೆ ಎಂದರು.

    ಈ ಪರಿಸರ ವಿಶ್ವ ವಿದ್ಯಾಲಯ ಸ್ಥಾಪನೆಗೆ ಅವಶ್ಯವಿರುವ ವಿಷಯಗಳ ಪ್ರಸ್ತಾವನೆಯನ್ನು ಹಿಂದಿನ ಸರ್ಕಾರಕ್ಕೆ ಸ್ಕೊಡ್‌ವೆಸ್ ಸಂಸ್ಥೆಯ ಮೂಲಕ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಸ್ವೀಕರಿಸಿ ಪರಿಶೀಲಿಸಿದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿರಸಿಯಲ್ಲಿ ಪರಿಸರ ವಿಶ್ವ ವಿದ್ಯಾಲಯ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿಯೂ ಘೋಷಿಸಿದ್ದರು. ಈಗ ಬದಲಾದ ಪರಿಸ್ಥಿತಿಯಲ್ಲಿ ಈಗಿನ ಸರ್ಕಾರ ಕೂಡ ನಮ್ಮ ಪ್ರಸ್ತಾವನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು. ಇದರಿಂದ ಅರಣ್ಯ ಅವಲಂಬಿತ ಸಮುದಾಯಗಳಿಗೆ ಪೂರಕವಾಗುತ್ತದೆ. ಜತೆಗೆ ದೇಶದಲ್ಲಿಯೇ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯೂ ಸಿಗಲಿದೆ ಎಂದರು.

    ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಸಂಸ್ಥೆಯ ನಿರ್ದೇಶಕ ಪ್ರೊ. ಕೆ.ಎನ್. ಹೊಸ್ಮನಿ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts