More

    ಅತ್ಯಂತ ಅವೈಜ್ಞಾನಿಕ ಶಿಕ್ಷಣ ನೀತಿ; ಬಡ ವಿದ್ಯಾರ್ಥಿಗಳಿಗೆ ಬದುಕಿಗೆ ಮಾರಕ: ಕಿಮ್ಮನೆ ರತ್ನಾಕರ್ ಆರೋಪ

    ತೀರ್ಥಹಳ್ಳಿ: ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಇದು ಬಡ ವಿದ್ಯಾರ್ಥಿಗಳಿಗೆ ಬದುಕಿಗೆ ಮಾರಕವಾಗಿದೆ. ಈ ನೀತಿಯ ಕುರಿತು ವಿದ್ಯಾರ್ಥಿಗಳೇ ಚಿಂತನೆ ನಡೆಸುವ ಮೂಲಕ ಸರ್ಕಾರವನ್ನು ಪ್ರಶ್ನಿಸಬೇಕಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಿಂದ ಶನಿವಾರ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಗೊಂದಲದಿಂದ ನಿಮ್ಮ ಕಲಿಕೆಯ ಮೇಲಾಗುವ ಪರಿಣಾಮವನ್ನು ನೀವುಗಳು ಅರ್ಥೈಸಿಕೊಳ್ಳಬೇಕಿದೆ. ಈ ಕಾಯ್ದೆ ಜಾರಿಯ ಬಗ್ಗೆ ಕರೆದಿದ್ದ ಸಭೆಯಲ್ಲಿ ನನ್ನನ್ನೂ ಆಹ್ವಾನಿಸಿದ್ದು ಈ ನೀತಿಯನ್ನು ಅಂದೇ ವಿರೋಧಿಸಿದ್ದೆ ಎಂದು ಹೇಳಿದರು.
    ದೇಶದಲ್ಲಿ ಈಗಾಗಲೇ ಹಣ ಮಾಡುವ ಉದ್ದೇಶದ ಖಾಸಗಿ ಶಾಲಾ ಕಾಲೇಜುಗಳು ಆವರಿಸಿವೆ. ಇದರ ನಡುವೆಯೇ ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಮತ್ತು ವಿದೇಶಿಯರಿಗೂ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಿರುವುದರಿಂದ ಬಡ ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗುವ ಆತಂಕವಿದೆ. ಸರ್ಕಾರ ನರ್ಸರಿಯಿಂದ ಪಿಯುವರೆಗೆ ಪೂರ್ಣ ಉಚಿತ ಶಿಕ್ಷಣ ನೀಡಬೇಕು. ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ಯಾವುದೇ ಕಾರಣಕ್ಕೂ ವಸೂಲಿ ಮಾಡಕೂಡದು. ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್‌ಟಾಪ್ ಹಾಗೂ ವಿದ್ಯಾಸಿರಿ ಯೋಜನೆಯನ್ನು ರದ್ದುಪಡಿಸಿರುವುದು ಖಂಡನೀಯ ಎಂದು ಹೇಳಿದರು.
    ಸಭಾ ಕಾರ್ಯಕ್ರಮಕ್ಕೆ ಮುನ್ನ ನೂರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿ ಘೋಷಣೆ ಕೂಗಿದರು.
    ಯಾರಿಗೆ ಹೇಳೋಣ ನಮ್ ಸಮಸ್ಯೆ: ಪತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲ ವಿದ್ಯಾರ್ಥಿಗಳು ಮಾತನಾಡಿ, ಎನ್‌ಇಪಿ ಜಾರಿ ಆಗಿರುವುದರಿಂದ ನಮಗೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಸರ್ಕಾರಿ ಕಾಲೇಜಿನಲ್ಲಿ ಓದುವ ನಾವು ಖಾಸಗಿ ಕಾಲೇಜುಗಳಿಗೆ ನೀಡಿದಂತೆ ಶುಲ್ಕವನ್ನು ನೀಡಬೇಕಾಗಿದೆ. ಕಾಲೇಜು ಶುರುವಾಗಿ 3 ತಿಂಗಳಲ್ಲಿ 5-6 ಸಾವಿರ ರೂ.ವರೆಗೆ ಶುಲ್ಕ ಕಟ್ಟಿದ್ದೇವೆ. ಮತ್ತೆ ಪರೀಕ್ಷೆ ಶುಲ್ಕ 1,770 ರೂ.ಕಟ್ಟಬೇಕಂತೆ. ನಾವೂ ಕೂಲಿ ಮಾಡೋರ ಮನೆಯವ್ರ ಅಂದರೂ ಹಣ ನೀಡದಿದ್ದರೆ ಕ್ರಮ ತಗೋತೀವಿ ಎಂದು ಬೆದರಿಕೆ ಹಾಕುತ್ತಾರೆ. ಲ್ಯಾಪ್‌ಟಾಪ್ ಕೊಡುವುದನ್ನು ಕೂಡ ನಿಲ್ಲಿಸಿದ್ದಾರೆ. ತರಗತಿಗಳೂ ಸರಿಯಾಗಿ ನಡೆಯುತ್ತಿಲ್ಲ. ನಮ್ ಸಮಸ್ಯೆನಾ ಯಾರಿಗೆ ಹೇಳ್ಬೇಕು ತಿಳಿಯುತಿಲ್ಲ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts