More

    ಬಾಕಿ ಬೆಳೆ ಹಾನಿ ಪರಿಹಾರ ಜಮೆ ಮಾಡಲು ಆಗ್ರಹ

    ಬ್ಯಾಡಗಿ: 2022-23ನೇ ಸಾಲಿನ ಬೆಳೆ ಹಾನಿ ಪರಿಹಾರ ತಹಸೀಲ್ದಾರ್ ಸೇರಿದಂತೆ ಸ್ಥಳೀಯ ಸಿಬ್ಬಂದಿ ನಿಷ್ಕಾಳಜಿಯಿಂದಾಗಿ ಕೋಟ್ಯಂತರ ರೂಪಾಯಿ ಜಿಲ್ಲಾಧಿಕಾರಿ ಹಂತದ ಲಾಗಿನ್‌ನಲ್ಲಿ ಉಳಿದುಕೊಳ್ಳುವಂತಾಗಿದೆ. ಕೂಡಲೇ ರೈತರಿಗೆ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಅತಿವೃಷ್ಟಿಗೆ ಸಾವಿರಾರು ಹೆಕ್ಟೇರ್‌ನಲ್ಲಿನ ಬೆಳೆ ಹಾಳಾಗಿತ್ತು. ಆಗ ಐವರ ಸಮಿತಿ ನೇಮಿಸಿದ್ದ ಸರ್ಕಾರ, ರೈತರ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ವಿತರಿಸುವಂತೆ ಅದೇಶಿಸಿತ್ತು. ಆದರೆ, ಸ್ಥಳೀಯ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಸಮರ್ಪಕ ಪರಿಹಾರ ಸಿಗದಂತಾಗಿದೆ. ಆಧಾರ ಲಿಂಕ್ ಹಾಗೂ ಬೆಳೆ ಆ್ಯಪ್‌ನ ಸಮಸ್ಯೆಯಿಂದಾಗಿ ರೈತರಿಗೆ ಪರಿಹಾರ ತಲುಪಿಲ್ಲ. ಇದಕ್ಕೆ ತಹಸೀಲ್ದಾರರೇ ಹೊಣೆ ಹೊರಬೇಕು. ಕೂಡಲೇ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

    862 ರೈತರಿಗಿಲ್ಲ ಪರಿಹಾರ: 2022-23ನೇ ಸಾಲಿನಲ್ಲಿ ಬೆಳೆ ನಷ್ಟ ಪರಿಹಾರಕ್ಕಾಗಿ ತಾಲೂಕಿನ 21,840 ರೈತರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 53 ಕೋಟಿ ರೂ.ಬಿಡುಗಡೆಯಾಗಿದೆ. ಇದರಲ್ಲಿ 862 ಜನ ರೈತರಿಗೆ ತಲುಪಬೇಕಾದ 1.07 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಈ ಕುರಿತು ಮಾಹಿತಿ ಒದಗಿಸುವಂತೆ ಆರು ತಿಂಗಳಿಂದ ಕಚೇರಿಗಳಿಗೆ ಅಲೆದಾಡಿದರೂ ದಾಖಲೆ ನೀಡುತ್ತಿಲ್ಲ. ಕೃಷಿ, ಕಂದಾಯ ಅಧಿಕಾರಿಗಳು ಪರಿಹಾರ ನೀಡುವಲ್ಲಿ ಜಂಟಿಯಾಗಿ ನಿರ್ವಹಿಸಬೇಕಿದ್ದು, ಇಬ್ಬರು ರೈತರಿಗೆ ಮಾಹಿತಿ ನೀಡುತ್ತಿಲ್ಲ. ಆಧಾರ್ ಲಿಂಕ್, ಖಾತೆಯ ಸಮಸ್ಯೆಯಿದ್ದಲ್ಲಿ 862 ರೈತರ ಪಟ್ಟಿಯನ್ನು ನೋಟಿಸ್ ಬೋರ್ಡ್‌ಗೆ ಏಕೆ ಹಚ್ಚಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿಗಳು ಕಂದಾಯ ನಿರೀಕ್ಷಕರು, ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಹಿಂದಿನ ವರ್ಷದ ಬೆಳೆ ಹಾನಿ ಪರಿಹಾರವನ್ನು ಆಯಾ ರೈತರ ಖಾತೆಗೆ ಜಮಾ ಮಾಡಿಸಬೇಕು. ಪ್ರಸಕ್ತ ಸಾಲಿನಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಪಡೆಯಲು ತಕ್ಷಣ ಆದೇಶಿಸಬೇಕು ಎಂದು ಒತ್ತಾಯಿಸಿದರು.

    ಗಂಗಣ್ಣ ಎಲಿ, ಕಿರಣ ಹೂಗಾರ, ಮಂಜುನಾಥ ಹಿರೇಮಠ, ಮೌನೇಶ ಬಡಿಗೇರ, ಪಾಂಡುರಂಗ ಸುತಾರ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts