More

    ಸರಿಯಾದ ಸಮಯಕ್ಕೆ ಬಸ್ ಸಂಚರಿಸಲು ಆಗ್ರಹ

    ಮಡಿಕೇರಿ: ಬೇಲೂರು ಬಸ್ ನಿಲ್ದಾಣದಿಂದ ಸಮಯಕ್ಕೆ ಸರಿಯಾಗಿ ಅರಸೀಕೆರೆ ಮಾರ್ಗದಲ್ಲಿ ಬಸ್ ಹೊರಡದ ಕಾರಣ ಕೆಲಸಕ್ಕೆ ಹೋಗಲು ವಿಳಂಬವಾಗುತ್ತಿದೆ. ಆದ್ದರಿಂದ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಿ ಕೊಡಿಸಿ ಕೊಡಬೇಕೆಂದು ಶಿಕ್ಷಕರು, ಉಪನ್ಯಾಸಕರು ಹಾಗೂ ವಿವಿ ಇಲಾಖೆ ಸಿಬ್ಬಂದಿ ಬೇಲೂರು ಬಸ್ ಘಟಕದ ಮುಂಭಾಗ ಬುಧವಾರ ಪ್ರತಿಭಟಿಸಿದರು.


    ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಧರ್ಮೇಗೌಡ ಮಾತನಾಡಿ, ಬೇಲೂರಿನಿಂದ ಜಾವಗಲ್ ಹಾಗೂ ಮುಂದಿನ ಊರುಗಳಿಗೆ ಉದ್ಯೋಗಕ್ಕಾಗಿ 50ಕ್ಕೂ ಹೆಚ್ಚು ಶಿಕ್ಷಕರು, ಉಪನ್ಯಾಸಕರು ಹಾಗೂ ವಿವಿಧ ಇಲಾಖೆ ನೌಕರರು ಬಸ್‌ನಲ್ಲಿ ಹೋಗುವವರಿದ್ದೇವೆ. ಆದರೆ ಕಳೆದ ಒಂದು ವರ್ಷದಿಂದ ಬೇಲೂರು ಬಸ್ ನಿಲ್ದಾಣದಿಂದ ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ವಾರದಲ್ಲಿ ಎರಡು-ಮೂರು ದಿನ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಒಂದೊಂದು ದಿನ ಒಂದರಿಂದ ಎರಡು ಗಂಟೆ ತಡವಾಗುತ್ತದೆ. ಈ ವಿಚಾರವಾಗಿ ಪ್ರತಿದಿನ ಶಾಸಕರು, ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್ ಮಾಡಿ ಹೋಗುವಂತ್ತಾಗಿದೆ. ಜತೆಗೆ ಬೇಲೂರು-ಅರಸೀಕೆರೆ ಮಾರ್ಗವಾಗಿ ಬೆಳಗ್ಗೆ ಮತ್ತು ಸಂಜೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ. ಕೆಲ ಬಾರಿ ಒಂದೇ ಬಾರಿಗೆ ಮೂರು, ನಾಲ್ಕು ಬಸ್‌ಗಳು ಹೋಗುತ್ತವೆ. ಮತ್ತೆ ಕೆಲವೊಮ್ಮೆ ಬಸ್‌ಗಳೇ ಬರುವುದಿಲ್ಲ. ಆದ್ದರಿಂದ ಈ ಮಾರ್ಗದಲ್ಲಿ ಸಾರ್ವಜನಿಕರು ಮತ್ತು ಸರ್ಕಾರಿ ಕೆಲಸಕ್ಕೆ ತೆರಳುವ ನೌಕರರಿಗೆ ಬೇಲೂರು ನಿಲ್ದಾಣದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಕೇಳಿ ಕೊಳ್ಳುತ್ತೇವೆ ಎಂದರು.


    ಶಿಕ್ಷಕರಾದ ಅಶೋಕ್, ಸುರೇಶ್ ನಾಯಕ್, ನಾಗರಾಜು, ಲತಾ, ತಬಸೀನ್, ಧನ್ಯಾ ಸೇರಿದಂತೆ ಇತರರಿದ್ದರು. ಈ ಸಂದರ್ಭ ಶಿಕ್ಷಕರು ಮತ್ತು ಬಸ್ ಘಟಕ ಸಿಬ್ಬಂದಿ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

    ಹೇಳಿಕೆ: ಬೇಲೂರು ಬಸ್ ನಿಲ್ದಾಣದಿಂದ ಪ್ರತಿದಿನ ಸರಿಯಾದ ಸಮಯಕ್ಕೆ ಬಸ್‌ಗಳು ತೆರಳುತ್ತಿವೆ. ಆದರೆ ಒಂದೊಂದು ದಿನ 5 ರಿಂದ 10 ನಿಮಿಷ ತಡವಾಗುತದೆ. ಆ ಸಂದರ್ಭ ಬೇರೆ ಬಸ್ ವ್ಯವಸ್ತೆ ಮಾಡುತ್ತೇವೆ. ಬುಧವಾರದಂದು ಡಿಪೋದಲ್ಲಿ ಇಟಿಎಂ ಮಿಷಿನ್ ಕೊಡುವ ಸಂದರ್ಭ ಸರ್ವರ್ ಸಮಸ್ಯೆಯಿಂದ ಬಸ್ ಹೋಗುವುದು ತಡವಾಗಿದ್ದರಿಂದ ಬೇರೆ ರೂಟ್ ಬಸ್ ವ್ಯವಸ್ಥೆ ಮಾಡಿ ಕಳುಹಿಸಿದೆವು. ಆದರೆ ಇವರಾರೂ ಆ ಬಸ್ಸಿಗೆ ಹತ್ತದ ಕಾರಣ ಬಸ್ ಖಾಲಿ ಹೋಯಿತು. ಜತೆಗೆ ಇವರು ಡಿಪೋದಲ್ಲಿರುವಾಗಲೇ ಮೂರು ಬಸ್‌ಗಳು ಹೋಗಿವೆ. ಆದರೂ ಅವರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿದರೆ ನಾವು ಏನು ಮಾಡಬಹುದು? ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಬೇಲೂರು ಬಸ್ ಡಿಪೋದಿಂದ ಬಸ್‌ಗಳನ್ನು ಬಿಡುತ್ತಿದ್ದೇವೆ.
    ಅನುಕುಮಾರ್, ವ್ಯವಸ್ಥಾಪಕ ಬೇಲೂರು ಬಸ್ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts