More

    ಕೋವಿಡ್ ಟೆಸ್ಟ್‌ಗೆ ಡಿಮಾಂಡ್

    ಕೆ.ಎನ್.ರಾಘವೇಂದ್ರ ಮಂಡ್ಯ
    ಕೆಲ ದಿನಗಳ ಹಿಂದೆ ಕರೊನಾ ಟೆಸ್ಟ್‌ಗೆಂದು ಜನರನ್ನು ಕರೆತರುವುದೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ದೊಡ್ಡ ತಲೆನೋವಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಕೋವಿಡ್ ಟೆಸ್ಟ್ ಮಾಡಿಸಲು ಜನರು ಆಸ್ಪತ್ರೆ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

    ಆರೋಗ್ಯ ಇಲಾಖೆ, ಪೊಲೀಸರು ಶಂಕಿತರ ಮನವೊಲಿಸಿ ಗಂಟಲಿನ ದ್ರವ ಸಂಗ್ರಹಿಸಲು ಕರೆದುಕೊಂಡು ಹೋದರೆ ಯುದ್ದ ಗೆದ್ದಂತಹ ಪರಿಸ್ಥಿತಿ ಇತ್ತು. ಈಗ ಜನರೇ ಪರೀಕ್ಷೆಗಾಗಿ ಗಂಟಲಿನ ದ್ರವ ತೆಗೆದುಕೊಳ್ಳಿ ಎಂದು ಮುಗಿಬೀಳುತ್ತಿದ್ದಾರೆ.

    ಸರಾಸರಿ 800 ಜನ: ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 800 ಜನರು ಕೋವಿಡ್ ಟೆಸ್ಟ್ ಮಾಡಿಸಲು ಆಸ್ಪತ್ರೆಗೆ ದಾಂಗುಡಿ ಇಡುತ್ತಿದ್ದಾರೆ. ಆರೋಗ್ಯ ಕಾಳಜಿಯಿಂದ ಇದು ಉತ್ತಮ ಬೆಳವಣಿಗೆಯಾಗಿದೆ. ಮತ್ತೊಂದೆಡೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಒತ್ತಡ ಹೆಚ್ಚಾಗುತ್ತಿದೆ. ಆದರೂ, ಕರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕಾದರೆ ಪರೀಕ್ಷೆ ಮಾಡುವುದು ಅನಿವಾರ್ಯವಾಗಿದೆ.

    ಇನ್ನು ಜನರು ಈ ರೀತಿ ಮುಗಿಬೀಳುವುದಕ್ಕೂ ಕಾರಣವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸೋಂಕಿತರ ಮತ್ತವರ ಟ್ರಾವೆಲ್ ಹಿಸ್ಟರಿ. ಈಗ ಪಾಸಿಟಿವ್ ಬಂದಿರುವವರು ನ್ಯಾಯಾಲಯ, ವೈದ್ಯರು, ವ್ಯಾಪಾರಿಗಳು ಸೇರಿ ಜನರೊಂದಿಗೆ ಸಂಪರ್ಕ ಹೊಂದಿರುವವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ಕಾಣಿಸಿಕೊಂಡಿರುವವರ ಬಳಿ ಸಂಪರ್ಕ ಹೊಂದಿರುವವರು ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಕೆಲಸ ನಿಮಿತ್ತ ನ್ಯಾಯಾಲಯಕ್ಕೆ ಬಂದಿರುವವರು, ವೈದ್ಯರ ಬಳಿ ಚಿಕಿತ್ಸೆ ಪಡೆದಿರುವವರಿಗೆ ಆತಂಕ ಹೆಚ್ಚಾಗುತ್ತಿದೆ.

    9 ದಿನದಲ್ಲೇ ದ್ವಿಶತಕ: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣ ತಪ್ಪುತ್ತಿದೆ ಎನ್ನುವುದಕ್ಕೆ ಪ್ರಕರಣಗಳ ಸಂಖ್ಯೆ ಸಾಕ್ಷಿಯಾಗುತ್ತಿದೆ. ಜು.1ರಿಂದ 9ರವರೆಗೆ ಬರೋಬ್ಬರಿ 214 ಜನರಲ್ಲಿ ಸೋಂಕು ದೃಢವಾಗಿದೆ. ಜು.1ರಂದು 5, 2ರಂದು 18, 3ರಂದು 33, 4ರಂದು 35, 5ರಂದು 10, 6ರಂದು 39, 7ರಂದು 29, 8ರಂದು 20 ಮಗತ್ತು 9ರಂದು ಬರೋಬ್ಬರಿ 24 ಜನರ ಪರೀಕ್ಷೆ ಪಾಸಿಟಿವ್ ಬಂದಿದೆ. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಈಗ ಬರುತ್ತಿರುವ ಪಾಸಿಟಿವ್ ಪ್ರಕರಣಗಳು ಬಹುತೇಕ ಬೆಂಗಳೂರಿನಿಂದ ಬಂದವರಿಂದಲೇ ಆಗಿವೆ. ಸೋಂಕಿತರ ಸಂಪರ್ಕದಲ್ಲಿರುವವರು ಕೂಡ ಕಡಿಮೆ ಏನಿಲ್ಲ. ಇನ್ನೊಂದು ಆತಂಕದ ವಿಚಾರವೆಂದರೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು. ಜು.1ರಿಂದ 9ರವರೆಗ 58 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ 398 ಜನರು ಗುಣಮುಖರಾಗಿದ್ದಾರೆ.

    2558 ಜನರ ವರದಿ ನಿರೀಕ್ಷೆ: ಜಿಲ್ಲಾಡಳಿತ ಈವರೆಗೆ ಅಂದರೆ ಜು.9ರವರೆಗೆ ಬರೋಬ್ಬರಿ 21,355 ಜನರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದೆ. ಈ ಪೈಕಿ 630 ಜನರಿಗೆ ಸೋಂಕು ದೃಢವಾಗಿದೆ. 18,171 ಜನರ ವರದಿ ನೆಗೆಟಿವ್ ಆಗಿದೆ. ಇನ್ನು 2,558 ಜನರ ವರದಿ ಜಿಲ್ಲಾಡಳಿತದ ಕೈ ಸೇರಬೇಕಿದೆ. ಸಧ್ಯ 166 ಜನರು ಹಾಸ್ಟೆಲ್ ಕ್ವಾರಂಟೈನ್‌ನಲ್ಲಿದ್ದರೆ, 2,398 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇವರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ.

    ಸೇನಾನಿಗೆ ಸನ್ಮಾನ: ಕೋವಿಡ್ ಪರಿಸ್ಥಿತಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯಿಂದ ಡಾ.ಬಿ.ಸಿ.ರಾಯ್ ಪ್ರಶಸ್ತಿ ಪಡೆದ ಮಿಮ್ಸ್ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮಂಡ್ಯ ನಗರದಲ್ಲಿರುವ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವೆಂಕಟೇಶ್ ಮತ್ತು ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿನಂದಿಸಿದರು.

    ಮೂರ‌್ನಾಲ್ಕು ದಿನದಿಂದ ಕೋವಿಡ್ ಟೆಸ್ಟ್ ಮಾಡಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಮೊದಲು ಜನರನ್ನು ಕರೆತರುವುದೇ ದೊಡ್ಡ ಸವಾಲಾಗಿತ್ತು. ಆದರೆ, ಈಗ ದಿನಕ್ಕೆ ಸುಮಾರು 800 ಜನರು ಪರೀಕ್ಷೆಗೆ ಆಗಮಿಸುತ್ತಿದ್ದಾರೆ.
    ಡಾ.ಎಚ್.ಪಿ.ಮಂಚೇಗೌಡ ಜಿಲ್ಲಾ ಆರೋಗ್ಯಾಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts