More

    ಅಂತಿಮ ಫಲಿತಾಂಶದಲ್ಲಿ 62 ಸ್ಥಾನಗಳಲ್ಲಿ ಆಪ್​ಗೆ ಭರ್ಜರಿ ಗೆಲುವು: ಬಿಜೆಪಿಗೆ 8, ಕಾಂಗ್ರೆಸ್​ ಸೊನ್ನೆ, ಕೇಜ್ರಿವಾಲ್​ ಹ್ಯಾಟ್ರಿಕ್​ ಸಾಧನೆ

    ನವದೆಹಲಿ: ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷವು ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಒಟ್ಟು 70 ಸ್ಥಾನಗಳಲ್ಲಿ 62ರಲ್ಲಿ ಗೆಲುವು ದಾಖಲಿಸುವ ಮೂಲಕ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

    ಕಳೆದ 2015ರ ಚುನಾವಣೆಯಲ್ಲಿ 67 ಸ್ಥಾನಗಳನ್ನು ಗೆದ್ದಿದ್ದ ಆಪ್​ ಈ ಬಾರಿ 4 ಸ್ಥಾನಗಳ ಹಿನ್ನಡೆ ಅನುಭವಿಸಿದರೂ ಕೂಡ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ಗೆಲುವಿನ ಖುಷಿಯಲ್ಲಿ ಕೇಜ್ರಿವಾಲ್​ ದೆಹಲಿ ಜನತೆಗೆ ಐ ಲವ್​ ಯು ಹೇಳಿ, ಸ್ಥಳೀಯ ಸಮಸ್ಯೆ ಹಾಗೂ ಸರ್ಕಾರದ ತಲುಪುವಿಕೆ ಮೇಲೆ ಗಮನ ವಹಿಸಿ, ಇದು ಹೊಸ ಬಗೆಯ ರಾಜಕಾರಣದ ಆರಂಭ ಎಂದು ದೆಹಲಿಯ ಆಪ್​ ಕಚೇರಿಯಲ್ಲಿ ಘೋಷಿಸಿದರು. ಅಲ್ಲದೆ, ದೆಹಲಿ ಜನತೆಗೆ ಧನ್ಯವಾದ ತಿಳಿಸಿದರು.

    ಇದನ್ನೂ ಓದಿ: ಪಡೆದ ಮತ, ಗೆಲುವಿನ ಅಂತರವೆಷ್ಟು?: ಕಳೆದ ಬಾರಿಗೆ ಹೋಲಿಸಿದರೆ ಕೊಂಚ ಹಿನ್ನಡೆ ಕಂಡ ಕೇಜ್ರಿವಾಲ್​

    ಇತ್ತ ಪ್ರತಿಷ್ಠೆಯ ಕಣವಾಗಿದ್ದ ದೆಹಲಿಯನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ಛಲದೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ನೇತೃತ್ವದಲ್ಲಿ ಭಾರಿ ಪ್ರಚಾರ ನಡೆಸಿದ್ದ ಬಿಜೆಪಿ, ಫಲಿತಾಂಶದಲ್ಲಿ 8 ಸ್ಥಾನವನ್ನು ಗಳಿಸಿ ಮುಖಭಂಗ ಅನುಭವಿಸಿದೆ. ಕಳೆದ ಚುನಾವಣೆಯಲ್ಲಿ ಕೇವಲ 3 ಸ್ಥಾನದಲ್ಲಿ ಜಯಿಸಿದ್ದ ಬಿಜೆಪಿ ಈ ಬಾರಿ 8 ಸ್ಥಾನಗಳಲ್ಲಿ ಜಯಗಳಿಸಿ ಚೇತರಿಕೆ ಕಂಡಿದ್ದರೂ ಇದು ಹೇಳಿಕೊಳ್ಳುವಷ್ಟು ಬೆಳವಣಿಗೆಯಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

    ದೆಹಲಿಯ ಶಾಹೀನ್​ ಬಾಘ್​ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯ ಪ್ರತಿಭಟನಾಕಾರರನ್ನು ಉಲ್ಲೇಖಿಸಿ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳು ಕೂಡ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಅದಕ್ಕೆ ಪುಷ್ಠಿ ನೀಡುವಂತೆ ಶಾಹೀನ್​ ಬಾಘ್​ ಒಳಪಡುವ ಓಕ್ಲಾ ಕ್ಷೇತ್ರದಲ್ಲಿ ಆಪ್​ ಅಭ್ಯರ್ಥಿ ಅಮಾನತುಲ್ಲಾ ಖಾನ್​ ಅವರು ಎದುರಾಳಿ ಬಿಜೆಪಿ ಅಭ್ಯರ್ಥಿ ಬ್ರಹಮ್​ ಸಿಂಗ್​ ವಿರುದ್ಧ ಬರೋಬ್ಬರಿ 71,827 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅಲ್ಲದೆ, ಕೇಜ್ರಿವಾಲ್​ ಅವರನ್ನು ಭಯೋತ್ಪಾದಕ ಎಂದು ಜರಿದಿದ್ದು ಮುಂತಾದ ಹೇಳಿಕೆಗಳು ಬಿಜೆಪಿಗೆ ತಿರುಗುಬಾಣವಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಕಳೆದ 22 ವರ್ಷಗಳಿಂದಲೂ ಬಿಜೆಪಿ ತೆಕ್ಕೆಯಿಂದ ಜಾರಿಕೊಳ್ಳುತ್ತಿರುವ ದೆಹಲಿ ಸಿಎಂ ಗಾದಿ: ಆಪ್​ ಸ್ಥಿರತೆ, ಕಾಂಗ್ರೆಸ್​ ಸ್ಥಿತಿ ಹೀನಾಯ

    ಬಿಜೆಪಿಯ ಭಾರಿ ಪ್ರಚಾರ ತಂತ್ರದ ನಡುವೆಯೂ ಆಪ್​ ಭರ್ಜರಿ ಬಹುಮತ ಸಾಧಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ, ಬದಲಾಗಿ ವಿದ್ಯುತ್​, ನೀರು, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಮುಂತಾದ ಸಮಸ್ಯೆಗಳ ಮೇಲೆ ಗಮನ ವಹಿಸಿದ್ದು ಆಪ್​ ಗೆಲವಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಇನ್ನು ದೆಹಲಿಯಲ್ಲಿ ಈ ಹಿಂದೆ ಬಲಿಷ್ಠವಾಗಿದ್ದ ಕಾಂಗ್ರೆಸ್ 2013ರ ಬಳಿಕ ಪ್ರಬಲ ನಾಯಕತ್ವದ ಕೊರತೆಯಿಂದಾಗಿ ಹೀನಾಯ ಸ್ಥಿತಿಗೆ ತಲುಪಿದೆ. ಕಳೆದ ಬಾರಿಯೂ ಝೀರೋ ಸುತ್ತಿದ್ದ ಕಾಂಗ್ರೆಸ್​ ಈ ಬಾರಿಯೂ ಅದನ್ನೇ ಮುಂದುವರಿಸಿದೆ. ಪ್ರಚಾರದ ವೇಳೆಯೂ ಛಾಪು ಮೂಡಿಸದ ಕಾಂಗ್ರೆಸ್​ ಆರಂಭದಿಂದಲೇ ಸುಮ್ಮನಾಗಿದ್ದನ್ನು ನೋಡಿದರೆ ತನ್ನ ಸೋಲನ್ನು​ ಮೊದಲೇ ಒಪ್ಪಿಕೊಂಡಿತ್ತು ಎಂದು ಹೇಳಲಾಗಿದೆ. ರಾಜಕೀಯದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್​ ಮೌಲ್ಯಮಾಪನ ಮಾಡಿಕೊಳ್ಳುವ ಸಮಯ ಇದಾಗಿದ್ದು, ಸೂಕ್ತ ನಾಯಕತ್ವದ ಆಯ್ಕೆಯನ್ನು ಮಾಡಲೇಬೇಕಾಗಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಬೇಕಾದ ಸಮಯವಾಗಿದೆ ಎಂಬುದನ್ನು ದೆಹಲಿ ಚುನಾವಣೆ ಮತ್ತೊಮ್ಮೆ ನೆನಪು ಮಾಡಿದೆ.

    ಇದನ್ನೂ ಓದಿ: ಸತತ ಎರಡು ಲೋಕಸಭೆ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿಗೆ ಕೈಗೆಟಕುತ್ತಿಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳು

    ಶೇಕಡವಾರು ಮತ ಹಂಚಿಕೆಯಲ್ಲೂ ಆಪ್​ ಶೈನ್​
    ಈ ಬಾರಿಯು ಶೇಕಡವಾರು ಮತ ಹಂಚಿಕೆಯಲ್ಲಿ ಆಪ್​ ಹೆಚ್ಚಿನ ಪಾಲನ್ನು ತನ್ನದಾಗಿಸಿಕೊಂಡಿದೆ. ಒಟ್ಟು 53.64 ರಷ್ಟು ಮತಗಳನ್ನು ಪಡೆದುಕೊಂಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಸಮವಾಗಿದೆ. ಇನ್ನು ಬಿಜೆಪಿ 38.46 ರಷ್ಟು ಮತಗಳನ್ನು ಪಡೆದುಕೊಂಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಕೊಂಚ ಚೇತರಿಕೆ ಕಂಡಿದೆ. ಇನ್ನು ಕಾಂಗ್ರೆಸ್​ ಮಾತ್ರ ಕೇವಲ 4.34 ರಷ್ಟು ಮತ ಪಡೆದುಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts