More

    ತೊಗರಿಬೇಳೆ ಸರಬರಾಜು ವಿಳಂಬ, ಸರ್ಕಾರಿ, ಅನುದಾನಿತ ಶಾಲೆಯ ವಿದ್ಯಾರ್ಥಿಗಳ ಕೈ ಸೇರಿಲ್ಲ ಬಿಸಿಯೂಟದ ಪಡಿತರ

    ಪಿ.ಎಸ್.ಹರೀಶ್ ಕೋಲಾರ
    ಜೂನ್‌ನಿಂದ ಅಕ್ಟೋಬರ್‌ವರೆಗೆ ಮಧ್ಯಾಹ್ನ ಉಪಹಾರ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ತೊಗರಿಬೇಳೆ ಸರಬರಾಜು ವಿಳಂಬದಿಂದ ಜಿಲ್ಲೆ ಸೇರಿ ರಾಜ್ಯದ ಬಹುತೇಕ ಸರ್ಕಾರಿ, ಅನುದಾನಿತ ಶಾಲೆಯ ಮಕ್ಕಳಿಗೆ ಇನ್ನೂ ಪಡಿತರ ಭಾಗ್ಯ ಸಿಕ್ಕಿಲ್ಲ.

    2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರೊನಾ ಹಾವಳಿಯಿಂದ ಶಾಲೆಗಳ ಪುನರಾರಂಭದ ಅನಿಶ್ಚಿತತೆ ಮುಂದುವರಿದಿದ್ದು, ಮಕ್ಕಳು ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯದಿಂದ ವಂಚಿತರಾಗಿದ್ದಾರೆ. ಶಾಲೆ ತೆರೆಯದ ಕಾರಣ ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಪಾಲಿನ ಅಕ್ಕಿ ಮತ್ತು ತೊಗರಿಬೇಳೆಯನ್ನು ಮೇ 31ರವರೆಗೆ ನೀಡಿ ಸ್ಥಗಿತಗೊಳಿಸಿತ್ತು.

    ಬಿಸಿಯೂಟ ಸ್ಥಗಿತಗೊಳಿಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಜೂನ್‌ನಿಂದ ಅಕ್ಟೋಬರ್ ವರೆಗೆ 5 ತಿಂಗಳ ಅವಧಿಗೆ ನಿಯಮಾನುಸಾರ ಆಹಾರ ಧಾನ್ಯ ಹಾಗೂ ಅಡುಗೆ ತಯಾರಿಕಾ ವೆಚ್ಚಕ್ಕೆ ಅನುಗುಣವಾಗಿ ತೊಗರಿಬೇಳೆ ವಿತರಿಸುವ ಮೂಲಕ ಮಧ್ಯಾಹ್ನ ಉಪಹಾರ ಯೋಜನೆ ಅನುಷ್ಠಾನಕ್ಕೆ 44.98 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ತೊಗರಿಯನ್ನು ಕೆಎಫ್‌ಸಿಎಸ್‌ಸಿ ಮೂಲಕ ವಿತರಿಸಲು ನ.3ರಂದು ಆದೇಶ ಹೊರಡಿಸಿತ್ತು.

    ಅದರಂತೆ ರಾಜ್ಯದ 54,282 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಟ್ಟು 55,57,792 ವಿದ್ಯಾರ್ಥಿಗಳಿದ್ದು, ಈ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲು ಆದೇಶಿಸಿ 20 ದಿನ ಕಳೆದರೂ ವಿತರಣೆ ಆಗಿಲ್ಲ.

    ವಿತರಣೆ ಆಗದ ತೊಗರಿಬೇಳೆ: 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಬಹುತೇಕ ಕಡೆ ಕೆಎಫ್‌ಸಿಎಸ್‌ಸಿಯಿಂದ ತೊಗರಿಬೇಳೆ ವಿತರಣೆ ಆಗದಿರುವುದರಿಂದ ಮಕ್ಕಳಿಗೆ ಇನ್ನೂ ಪಡಿತರ ಭಾಗ್ಯ ಸಿಕ್ಕಿಲ್ಲ. ದಾವಣಗೆರೆಯಲ್ಲಿ ಶೇ.75.59 ವಿತರಣೆ ಆದರೆ, ಚಿಕ್ಕಮಗಳೂರಿನಲ್ಲಿ ಶೇ 45.29, ಶಿರಸಿ ಶೇ.33.32, ಶಿವಮೊಗ್ಗದಲ್ಲಿ ಶೇ.20.69, ವಿಜಯಪುರದಲ್ಲಿ ಶೇ.17.22, ಉತ್ತರಕನ್ನಡದಲ್ಲಿ ಶೇ.16.17 ಮತ್ತು ದಕ್ಷಿಣ ಕನ್ನಡದಲ್ಲಿ ಶೇ.10.69 ಮಾತ್ರ ವಿತರಣೆಯಾಗಿದೆ. 15 ಶೈಕ್ಷಣಿಕ ಜಿಲ್ಲೆಯಲ್ಲಿ ಇನ್ನೂ ವಿತರಣೆ ಕಾರ್ಯ ಆರಂಭಗೊಂಡಿಲ್ಲ. ಉಳಿದ 12 ಜಿಲ್ಲೆಗಳಲ್ಲಿ ಶೇ.7ರಿಂದ ಶೇ.1 ಮಕ್ಕಳಿಗೆ ಆಯಾ ಶಾಲೆಗಳಲ್ಲಿ ಲಭ್ಯವಿರುವ ಪಡಿತರ ವಿತರಿಸಿದೆ.

    ಜಿಲ್ಲೆಯಲ್ಲಿ ಹೇಗಿದೆ: ಕೋಲಾರ ಜಿಲ್ಲೆಯಲ್ಲಿ 1ರಿಂದ 5ನೇ ತರಗತಿಯ 50,991 ಮಕ್ಕಳು, 6ರಿಂದ 8ನೇ ತರಗತಿಯ 35,078 ಮಕ್ಕಳು ಹಾಗೂ 9ರಿಂದ 10ನೇ ತರಗತಿಯ 24340 ಸೇರಿ ಒಟ್ಟು 1,10,409 ಮಕ್ಕಳಿದ್ದಾರೆ.

    53 ದಿನಗಳಿಗೆ ವಿತರಣೆ: ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಜೂನ್ ಮತ್ತು ಜುಲೈ ತಿಂಗಳ 53 ದಿನಗಳಿಗೆ ಪಡಿತರ ವಿತರಣೆಗೆ ಸಿದ್ಧತೆ ನಡೆದಿದೆ. ಅದರಂತೆ 1ರಿಂದ 5ನೇ ತರಗತಿಯವರೆಗೆ ಪ್ರತಿ ವಿದ್ಯಾರ್ಥಿಗೆ 4.5 ಕೆಜಿ ಬೇಳೆ, 6.11 ಕೆಜಿ ಅಕ್ಕಿ, 800 ಗ್ರಾಂ ಗೋಧಿ, 6ರಿಂದ 10ನೇ ತರಗತಿ ವರೆಗೆ 6.75 ಕೆಜಿ ಅಕ್ಕಿ, 1.2 ಕೆಜಿ ಗೋಧಿ ಮತ್ತು 4.611 ಕೆಜಿ ತೊಗರಿ ಬೇಳೆ ವಿತರಿಸಬೇಕಿದೆ.

    ಅದರಂತೆ ಜಿಲ್ಲೆಗೆ ಒಟ್ಟು 8,290 ಕ್ವಿಂಟಾಲ್ ಅಕ್ಕಿ, 1,770 ಕೆಜಿ ಗೋಧಿ ಮತ್ತು 4,141 ಕೆಜಿ ಬೇಳೆ ಅಗತ್ಯವಿದೆ. ಅಕ್ಕಿ ಮತ್ತು ಗೋಧಿ ದಾಸ್ತಾನು ಲಭ್ಯವಿದ್ದು, ತೊಗರಿ ಬೇಳೆ ಇನ್ನಷ್ಟೇ ಸರಬರಾಜು ಆಗಬೇಕಿದೆ. ಹೀಗಾಗಿ ಮಕ್ಕಳಿಗೆ ಪಡಿತರ ಕೈ ಸೇರುವುದು ವಿಳಂಬವಾಗಲಿದೆ.

    ಸರ್ಕಾರ ಎರಡು ತಿಂಗಳಿಗೆ ಪಡಿತರ ವಿತರಿಸಲು ನಿರ್ದೇಶನ ನೀಡಿದೆ. ಅಕ್ಕಿ, ಗೋಧಿ ದಾಸ್ತಾನಿದೆ. ತೊಗರಿ ಬೇಳೆಗೆ ಕೆಎಫ್‌ಸಿಎಸ್‌ಸಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಎರಡ್ಮೂರು ದಿನಗಳಲ್ಲಿ ಸರಬರಾಜಾಗಲಿದೆ. ಕರೊನಾ ಮಾರ್ಗಸೂಚಿ ಪಾಲಿಸಿಕೊಂಡು ಆಯಾ ಶಾಲೆಗಳಲ್ಲಿ ಮಕ್ಕಳಿಗೆ ಪಡಿತರ ವಿತರಿಸಲಾಗುವುದು.
    ತಿಮ್ಮರಾಯಪ್ಪ, ಸಹಾಯಕ ನಿರ್ದೇಶಕರು, ಬಿಸಿಯೂಟ ಯೋಜನೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts