More

    ಜಿಂಕೆಗಳ ಕಾಟದಿಂದ ರೈತರಿಗೆ ಸಂಕಟ

    ಮಾನ್ವಿ: ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಕೃಷಿಗೆ ಪೂರ್ಣ ಪ್ರಮಾಣದಲ್ಲಿ ಅನುಕೂಲವಾಗಿಲ್ಲ. ಲಭ್ಯ ನೀರಿನಲ್ಲೇ ತಾಲೂಕಿನ ರೈತರು ಹತ್ತಿ, ತೊಗರಿ, ಹೆಸರು ಬೇಳೆ ಬಿತ್ತನೆ ಮಾಡಿದ್ದಾರೆ. ಬೆಳೆ ಚಿಗುರೊಡೆದಿದ್ದು, ಫಸಲನ್ನು ಜಿಂಕೆಗಳು ತಿಂದು ನಾಶ ಮಾಡುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

    ಹಿರೇಕೊಟ್ನೆಕಲ್, ರಾಜಲದಿನ್ನಿ, ಮುಷ್ಟೂರು, ನಂದಿಹಾಳ, ಶಾಸ್ತ್ರಿ ಕ್ಯಾಂಪ್, ಕಲ್ಲೂರು ಇತರ ಗ್ರಾಮಗಳಲ್ಲಿ ಜಿಂಕೆಗಳ ಕಾಟ ಹೆಚ್ಚಾಗಿದೆ. ನಸುಕಿನ ಜಾವ ಹಾಗೂ ಸಂಜೆ ಹೊಲಗಳಲ್ಲಿ ಹಿಂಡು ಹಿಂಡು ಜಿಂಕೆಗಳು ಕಂಡುಬರುತ್ತಿವೆ. ಜಿಂಕೆಗಳು ಫಸಲು ತಿನ್ನುತ್ತಿರುವುದರಿಂದ ರೈತರು ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

    ಸದ್ಯದ ಪರಿಸ್ಥಿತಿಯಲ್ಲಿ ಒಮ್ಮೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡುವುದೇ ದುಸ್ತರವಾಗಿದೆ. ಮತ್ತೊಮ್ಮೆ ಬಿತ್ತನೆ ಮಾಡುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ತುರ್ತು ಕ್ರಮಕೈಗೊಳ್ಳುವ ಮೂಲಕ ಜಿಂಕೆ ಕಾಟ ತಪ್ಪಿಸಬೇಕೆಂಬುದು ರೈತರ ಒತ್ತಾಯವಾಗಿದೆ.
    ಹಿಂಗಾರು ಹಂಗಾಮಿನಲ್ಲಿ ಹತ್ತಿ, ಮೆಣಸಿನಕಾಯಿ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸಿದ್ದಾರೆ. ಈಗ ಜಿಂಕೆಗಳ ಕಾಟದಿಂದ ಮತ್ತೊಮ್ಮೆ ನಷ್ಟದ ಭೀತಿಯಲ್ಲಿದ್ದಾರೆ. ಜಿಂಕೆಗಳ ಹಾವಳಿಯಿಂದಾಗಿ ಪ್ರತಿವರ್ಷ ಸಾವಿರಾರು ರೂ. ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂಬುದು ಕಲ್ಲೂರು ಗ್ರಾಮದ ರೈತ ಗುಂಡಪ್ಪಗೌಡ ಅವರ ಅಳಲಾಗಿದೆ.

    ಕೆಲ ರೈತರು ಜಮೀನಿನ ಸುತ್ತ ಬೇಲಿ ಹಾಕಿ ಇಲ್ಲವೇ ಜಮೀನಿನಲ್ಲೇ ಗುಡಿಸಲು ನಿರ್ಮಿಸಿಕೊಂಡು ಜಿಂಕೆಗಳಿಗೆ ನಿಯಂತ್ರಣ ಹಾಕಲು ಮುಂದಾಗಿದ್ದಾರೆ. ಒಂದೆರಡು ಜಿಂಕೆಗಳಾಗಿದ್ದರೆ ನಿಯಂತ್ರಿಸಬಹುದಿತ್ತು. ಹಿಂಡುಹಿಂಡಾಗಿ ಬರುತ್ತಿರುವುದರಿಂದ ನಿಯಂತ್ರಣಕ್ಕೆ ರೈತರು ಪರದಾಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts