More

    ದೀಪಕ್ ಕೊಲೆ ಆರೋಪಿ ಹತ್ಯೆ ಯತ್ನ

    ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ ಬಳಿಯ ಕಾಟಿಪಳ್ಳ ಎರಡನೇ ಕ್ರಾಸ್‌ನಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದ ಆರೋಪಿಯನ್ನು ಬುಧವಾರ ಸಾಯಂಕಾಲ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದೆ.

    ಕೃಷ್ಣಾಪುರ ನಿವಾಸಿ ಪಿಂಕಿ ನವಾಜ್(26) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೌಡಿ ಶೀಟರ್ ಆಗಿದ್ದು, ಈತನ ಮೇಲೆ ಹಲವು ಪ್ರಕರಣಗಳಿವೆ. ಈತ ರಸ್ತೆ ಬದಿ ನಿಂತಿದ್ದಾಗ ಕಾರಿನಲ್ಲಿ ಬಂದ ನಾಲ್ಕೈದು ಮಂದಿಯ ತಂಡ ಅಟ್ಟಾಡಿಸಿ ಕೊಲೆಗೆ ಯತ್ನಿಸಿದೆ. ತಲವಾರು ಇರಿತಕ್ಕೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಪಿಂಕಿ ನವಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಗೆ ಕಾರಣ ತಿಳಿದುಬಂದಿಲ್ಲ. ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಮೊದಲು ಪ್ರಚಾರವಾಗಿತ್ತು. ಆದರೆ ಗಾಯಾಳು ಪಿಂಕಿ ನವಾಜ್ ಪೊಲೀಸರಿಗೆ ತನ್ನ ಮೇಲೆ ದಾಳಿ ನಡೆಸಿದವರ ಮಾಹಿತಿ ನೀಡಿದ್ದಾನೆ. ರೌಡಿ ಗ್ಯಾಂಗ್ ಶಾಕಿಬ್ ಮತ್ತು ಆತನ ತಂಡ ಮನಸ್ತಾಪದಿಂದ ಈ ಕೃತ್ಯ ನಡೆಸಿದ್ದಾಗಿ ಆಸ್ಪತ್ರೆಯಲ್ಲಿ ಸ್ವತಃ ಪೊಲೀಸರಿಗೆ ತಿಳಿಸಿದ್ದಾನೆ.

    ಪಿಂಕಿ ನವಾಜ್‌ನ ಎದುರಾಳಿ ಗ್ಯಾಂಗ್‌ನ ಶಾಕೀಬ್ ಯಾನೆ ಶಾಬ್ಬು ಮತ್ತಿತರರು ಕಾರಿನಲ್ಲಿ ಬಂದು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

    ಪಿಂಕಿ ನವಾಜ್‌ಗೆ ಗುಂಡು ಬಿದ್ದಿತ್ತು: 2018ರಲ್ಲಿ ಕಾಟಿಪಳ್ಳದಲ್ಲಿ ಜಾತ್ರೆಯ ಬ್ಯಾನರ್ ವಿಚಾರದಲ್ಲಿ ಕಾಟಿಪಳ್ಳದಲ್ಲಿ ಎರಡು ಗುಂಪುಗಳ ನಡುವೆ ಚಕಮಕಿ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಪಿಂಕಿ ನವಾಜ್ ಮತ್ತಿತರರು ಜ.3ರಂದು ಕಾರಿನಲ್ಲಿ ಆಗಮಿಸಿ ಕಾಟಿಪಳ್ಳದಲ್ಲಿ ಅಬ್ದುಲ್ ಮಜೀದ್ ಎಂಬುವರ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ಸ್ಥಳೀಯ ಯುವಕ, ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರನ್ನು ಸಂಜೆ ವೇಳೆ ತಲವಾರಿನಿಂದ ಇರಿದು ಕೊಂದಿದ್ದರು. ಬಳಿಕ ಕಾರಿನಲ್ಲಿ ಪರಾರಿಯಾದ ಪಿಂಕಿ ನವಾಜ್ ತಂಡವನ್ನು ಪೊಲೀಸರು ಕಿನ್ನಿಗೋಳಿ ಸಮೀಪ ಮುಚ್ಚೂರಿನಲ್ಲಿ ಅಡ್ಡಗಟ್ಟಿ ತಡೆಯಲು ಯತ್ನಿಸಿದ್ದರು. ಅಷ್ಟರಲ್ಲಿ ಪಿಂಕಿ ನವಾಜ್ ತಂಡ ಪೊಲೀಸರ ಮೇಲೆಯೇ ತಲವಾರು ಬೀಸಿ ಪರಾರಿಗೆ ಯತ್ನಿಸಿತ್ತು. ಆಗ ಪೊಲೀಸರು ಗುಂಡು ಹಾರಿಸಿದ್ದರು. ಇದರಿಂದ ಪಿಂಕಿ ನವಾಜ್ ಕಾಲಿಗೆ ಗುಂಡೇಟು ತಗುಲಿದ್ದು, ಬಳಿಕ ಪಿಂಕಿ ನವಾಜ್ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    ಪಿಂಕಿ ನವಾಜ್ ಮೇಲೆ ಈಗಾಗಲೇ ಕೊಲೆ, ಕೊಲೆ ಯತ್ನ, ಸುಲಿಗೆ, 10ಕ್ಕಿಂತಲೂ ಅಧಿಕ ಕಳವು ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ರೌಡಿಶೀಟ್ ಕೂಡ ತೆರೆಯಲಾಗಿದೆ.

    ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಉಪ ಆಯುಕ್ತರಾದ ಹರಿರಾಂ ಶಂಕರ್, ವಿನಯ ಗಾಂವ್ಕರ್, ಎಸಿಪಿ ಕೆ.ಯು.ಬೆಳ್ಳಿಯಪ್ಪ ಮೊದಲಾದ ಹಿರಿಯ ಅಧಿಕಾರಿಗಳು ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

    ಆರೋಪಿಗಳ ಸುಳಿವು ಲಭ್ಯ: ಪಿಂಕಿ ನವಾಜ್ ಮೇಲೆ ಹಲ್ಲೆ ನಡೆಸಿದ ಶಾಕೀಬ್ ಯಾನೆ ಶಾಬು ಹಾಗೂ ಸಹಚರರ ಬಗ್ಗೆ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts