More

    ನಿವೇಶನ ಹಂಚಿಕೆಗೆ ಡೀಮ್ಟ್ ಫಾರೆಸ್ಟ್ ಕಾನೂನು ತೊಡಕು

    ಆಲ್ದೂರು: ಜಿಲ್ಲೆಯಲ್ಲಿ ಬಹುತೇಕ ಡೀಮ್ಡ್ ಅರಣ್ಯ ಜಾಗವಾಗಿದ್ದು, ಕಾನೂನು ತೊಡಕನಿಂದ ನಿವೇಶನ ಹಂಚಿಕೆ ದೊಡ್ಡ ಸವಾಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ವಿಷಯ ಚರ್ಚೆ ನಡೆದಿದ್ದು ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

    ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ನಿವೇಶನ ಹಂಚಿಕೆ ಸಮಸ್ಯೆಯಿದೆ ಎಂದರು.
    ಸ್ಥಳೀಯ ರವಿಚಂದ್ರ ಮಾತನಾಡಿ, ಪಟ್ಟಣದಲ್ಲಿ 45 ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ. ಗ್ರಾಪಂಗೆ 2 ಸಾವಿರ ಅರ್ಜಿ ಬಂದಿವೆ ಎಂದು ತಿಳಿಸಿದರು.
    ಚಿಕ್ಕಮಾಗರವಳ್ಳಿ, ಸಂತೆಮೈದಾನ, ಗಾಳಿಗಂಡಿ ಭಾಗದಲ್ಲಿ ನಮ್ಮ ಭೂಮಿ ನಮ್ಮ ತೋಟ ಯೋಜನೆಯಲ್ಲಿ 9ಎಕರೆ ಭೂಮಿಯನ್ನು ಗ್ರಾಪಂ ಈ ಹಿಂದೆಯೆ ಖರೀದಿಸಿದ್ದು ನಿವೇಶನ ಹಂಚಿಕೆಯಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.
    ಸದಸ್ಯ ಭರತ್ ಮಾತನಾಡಿ, ಪಟ್ಟಣದ ದನಗಳ ದೊಡ್ಡಿ ಜಾಗ ಒತ್ತುವರಿಯಾಗಿದ್ದು ತಾಪಂ ಇಒ ಗಮನಕ್ಕೆ ತಂದು ವರ್ಷಗಳೇ ಕಳೆದಿವೆ ಎಂದು ಶಾಸಕರ ಗಮನಕ್ಕೆ ತಂದರು.
    ಕಸಾಪ ಹೋಬಳಿ ಅಧ್ಯಕ್ಷ ನೂರು ಅಹಮ್ಮದ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಆಟೋ ನಿಲ್ದಾಣದ ಶೌಚಗೃಹ ಗಬ್ಬುನಾರುತ್ತಿದೆ ಎಂದು ತಿಳಿಸಿದರು. ನಯನಾ ಮೋಟಮ್ಮ ಮಾತನಾಡಿ, ಬಸ್ ನಿಲ್ದಾಣದಲ್ಲಿ ಉತ್ತಮ ಶೌಚಗೃಹ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
    ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್ ಮಾತನಾಡಿ, ಅಸ್ಸಾಂ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇವರ ದಾಖಲೆಗಳನ್ನು ಸಂಗ್ರಹಿಸಿ ನಿಗಾ ವಹಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
    ಗ್ರಾಪಂ ಮಾಜಿ ಸದಸ್ಯ ಆಶ್ರಫ್ ಮಾತನಾಡಿ, ಆಲ್ದೂರಿನಿಂದ ವಸ್ತಾರೆಯವರೆಗೆ ರಸ್ತೆ ಗುಂಡಿ ಬಿದ್ದಿದೆ. ರಸ್ತೆಯ ಅಕ್ಕಪಕ್ಕ ಪೊದೆ ಬೆಳೆದುಕೊಂಡಿದ್ದು ಪಿಡಬ್ಲುೃಡಿ ರಸ್ತೆ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದರು.
    ಆಲ್ದೂರಿನ ಸಂತೆಮೈದಾನ, ರೈಸ್‌ಮಿಲ್ ರಸ್ತೆಯ ಸ್ಮಶಾಸನಗಳ ದಾಖಲಾತಿಗಳು ಸರಿಯಿಲ್ಲ. ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಂತೆಮೈದಾನದ ವಾಸಿ ಜೋಸೆಫ್, ಮನು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸಿ. ಸಮಸ್ಯೆಗಳಿರುವ ಜಾಗದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿಸಿ ಸಮಸ್ಯೆ ಪರಿಹರಿಸಿ ಎಂದರು. ಸರ್ಕಾರಿ ಆಸ್ಪತ್ರೆಗೆ ಆಂಬೂಲೆನ್ಸ್ ನೀಡಬೇಕು ಎಂದು ಜೋಸೆಫ್ ಒತ್ತಾಯಿಸಿದರು.
    ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿ ದೊಡದಿದ್ದು ಸಾವಿರಕ್ಕೂ ಹೆಚ್ಚು ಹಳ್ಳಿಗಳಿವೆ. ನಾನು ಗ್ರಾಮಗಳಿಗೆ ಹೋಗಲು ಸಾಧ್ಯವಿಲ್ಲ. ಸಭೆಯಲ್ಲಿ ಗಮನಕ್ಕೆ ತಂದ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts