More

    ವೇಶ್ಯಾವಾಟಿಕೆಗೆ ಕಡಿವಾಣ ಹಾಕಿ

    ಬೆಳಗಾವಿ: ನಗರದ ಮಾರುಕಟ್ಟೆ, ಜನ ವಸತಿ ಪ್ರದೇಶಗಳಲ್ಲಿಯೂ ಹೆಚ್ಚುತ್ತಿರುವ ವೇಶ್ಯಾವಾಟಿಕೆ ಚಟುವಟಿಕೆಗೆ ಕಡಿವಾಣ ಹಾಕಿ. ಅಲ್ಲದೆ, ಸಿಟಿ ವ್ಯಾಪ್ತಿಯಲ್ಲಿ ಪಾರ್ಕಿಂಗ್, ಸಂಚಾರ ದಟ್ಟಣೆ, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸಿ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಲ್ಲಿ ಕೋರಿಕೊಂಡರು.

    ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಗುರುವಾರ ಜರುಗಿದ ಜನಸಂಪರ್ಕ ಸಭೆಯಲ್ಲಿ ಗಣಪತಿ ಗಲ್ಲಿ, ಬಸವನ ಗಲ್ಲಿ, ಖಡೇಬಜಾರ, ರಾಮಲಿಂಗಕಿಂಡ ಗಲ್ಲಿ, ಕುಲಕರ್ಣಿ ಗಲ್ಲಿ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು, ಅಂಗಡಿಕಾರರು ಮಾತನಾಡಿ, ಸಂಜೆಯಾದರೆ ಮನೆಬಿಟ್ಟು ಹೊರಗೆ ಹೋಗಲು ಸಾಧ್ಯವಾಗದಂತ ಪರಿಸ್ಥಿತಿ ಇದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಡಿಸಿಪಿ ಡಾ.ವಿಕ್ರಂ ಅಮ್ಟೆ ಅವರಲ್ಲಿ ವಿನಂತಿಸಿದರು.

    ಸಾರ್ವಜನಿಕರ ಅಸಮಾಧಾನ: ಕಳೆದ ಹಲವು ವರ್ಷಗಳಿಂದ ಶನಿವಾರ ಕೂಟ, ಬಸವನ ಗಲ್ಲಿ, ಗಣಪತಿ ಗಲ್ಲಿ ಸೇರಿದಂತೆ ವಿವಿಧ ಕಡೆ ಸಾರ್ವಜನಿಕ ಪ್ರದೇಶದಲ್ಲೂ ವೇಶ್ಯಾವಾಟಿಕೆ ನಡೆಯುತ್ತಿದೆ. ಹೀಗಾಗಿ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತಿದೆ. ರಾತ್ರಿ ವೇಳೆ ಈ ಭಾಗಗಳಲ್ಲಿ ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದೂ ಕಷ್ಟವಾಗಿದೆ. ಕೆಲ ಲಾಡ್ಜ್‌ಗಳಲ್ಲಿ ವೇಶ್ಯಾವಾಟಿಕೆ ಚಟುವಟಿಕೆ ನಡೆಯುತ್ತಿರುವ ಕುರಿತು ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಅಶೋಕ ಬೈಲವಾಡ, ದೀಪಕ ಗಾವಡೆ ಇತರರು ಅಸಮಾಧಾನ ವ್ಯಕ್ತಪಡಿಸಿದರು.

    ಸಂಚಾರ ದಟ್ಟಣೆ ನೀಗಿಸಿ: ನಗರದ ಕುಲಕರ್ಣಿ ಗಲ್ಲಿ, ಭಾವೆ ಚೌಕ್, ಕಪಿಲೇಶ್ವರ ರಸ್ತೆ, ಕಲ್ಮಠ ರಸ್ತೆ, ಖಡೇಬಜಾರ, ಶನಿವಾರ ಕೂಟ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳ ಮಧ್ಯದಲ್ಲಿಯೇ ತಳ್ಳುಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಪಾರ್ಕಿಂಗ್ ಸೌಲಭ್ಯ ಹೊಂದಿರದ ವಾಣಿಜ್ಯ ಮಳಿಗೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಬೇಡಿಕೆ ಕೇಳಿ ಬಂತು.

    ಪೊಲೀಸರಿಂದ ದಂಡ: ನಗರದಲ್ಲಿ ಪಾರ್ಕಿಂಗ್ ನಾಮಫಲಕ ಅಳವಡಿಸಿಲ್ಲ ಮತ್ತು ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಆದರೆ, ಸಂಚಾರಿ ಪೊಲೀಸರು ನೋ ಪಾರ್ಕಿಂಗ್ ಎಂದು ಹೇಳಿ ಸಾವಿರಾರು ರೂ. ದಂಡ ಹಾಕುತ್ತಿದ್ದಾರೆ. ಕೇವಲ 5 ರಿಂದ 10 ನಿಮಿಷ
    ರಸ್ತೆ ಪಕ್ಕ ವಾಹನ ನಿಲ್ಲಿಸಿದ್ದಕ್ಕೆ ದಂಡ ಹಾಕಲಾಗುತ್ತಿದೆ ಎಂದು ವಿಕಾಸ ಕಲಘಟಗಿ, ಮೋಹನ ತಾರೇಕರ್, ಎಂ.ಅಂಗಡಿ, ಅಶೋಕ ಜಕ್ಕಣ್ಣವರ, ಸಂಜಯ ಕಿಲ್ಲೇಕರ್, ರವಿ ಕಲಘಟಗಿ ಇತರರು ದೂರಿದರು.

    ಕ್ರಮದ ಭರವಸೆ: ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಮಾತನಾಡಿದ ಡಿಸಿಪಿ ಡಾ.ವಿಕ್ರಂ ಆಮ್ಟೆ, ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳಗಳ ಮೇಲೆ ಖುದ್ದಾಗಿ ದಾಳಿ ನಡೆಸುತ್ತೇನೆ. ಮಾರುಕಟ್ಟೆ ರಸ್ತೆಯಲ್ಲಿ, ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ವ್ಯಾಪಾರ ನಡೆಸುವುದಕ್ಕೆ ಕಡಿವಾಣ ಹಾಕಲಾಗುವುದು. ಪಾರ್ಕಿಂಗ್ ಸೌಲಭ್ಯ ಕುರಿತು ಪಾಲಿಕೆಗೆ ಪತ್ರ ಬರೆಯಲಾಗುವುದು. ಸಮಸ್ಯೆ ಪರಿಹರಿಸಲಾಗುವುದು ಎಂದರು. ಸಿಪಿಐ ಚಂದ್ರಪ್ಪ, ಸಂಚಾರಿ ಎಸಿಪಿ ಶರಣಪ್ಪ, ಸಿಪಿಐ ಮಂಜುನಾಥ ನಾಯಕ್ ಇದ್ದರು.

    ಚರ್ಚಿತ ವಿಷಯಗಳು:
    ಬುರಡ ಗಲ್ಲಿಯ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಮದ್ಯದ ಅಂಗಡಿ ಬಂದ್ ಮಾಡಿ
    ಚನ್ನಮ್ಮ ವೃತ್ತದಿಂದ ಸಂಭಾಜಿರಾವ್ ವೃತ್ತದವರೆಗಿನ ರಸ್ತೆಯಲ್ಲಿ ಉಬ್ಬು ನಿರ್ಮಿಸಿ
    ಸರ್ದಾರ ಮೈದಾನದಲ್ಲಿ ಸಂಜೆ 6ರಿಂದ ರಾತ್ರಿ 9ರ ವರೆಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ
    ಸಮಾದೇವಿ ದೇವಸ್ಥಾನದ ಸುತ್ತಮುತ್ತ ನೋ ಪಾರ್ಕಿಂಗ್ ಘೋಷಿಸಿ
    ನಗರದ ಕಾಲೇಜ್ ರಸ್ತೆಯಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಿ
    ದೇವಸ್ಥಾನ, ಮಸೀದಿ, ಚರ್ಚ್, ಬಹುಮಹಡಿ ಕಟ್ಟಡಗಳಿಗೆ ಸಿಸಿಟಿವಿ ಕಡ್ಡಾಯಗೊಳಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts