More

    ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧಾರ

    ಗುಂಡ್ಲುಪೇಟೆ: ಪರಿಶಿಷ್ಟರು ಹಾಗೂ ಸೋಲಿಗರು ವಾಸಿಸುವ ಗ್ರಾಮಗಳಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ತಾಲೂಕಿನ ಬರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಟೀಪುರ ಮತ್ತು ಬರಗಿ ಕಾಲನಿ ಜನರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

    ಮುಂಟೀಪುರ ಗ್ರಾಮದ ಗಣೇಶನಗುಡಿ ಬಳಿ ಮಂಗಳವಾರ ಸಮಾವೇಶಗೊಂಡ ಎರಡೂ ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು, ‘ವಿಜಯವಾಣಿ’ಯೊಂದಿಗೆ ತಮ್ಮ ಪರಿತಾಪಗಳನ್ನು ಹಂಚಿಕೊಂಡರು.

    ಮುಖಂಡ ಮಹದೇವಸ್ವಾಮಿ ಮಾತನಾಡಿ, 1961-62 ರಲ್ಲಿ ಸರ್ಕಾರ ಪರಿಶಿಷ್ಟರಿಗೆ ನೀಡಿದ ಭೂಮಿಯನ್ನು ಇನ್ನೂ ಪೋಡು ಮಾಡಿಕೊಟ್ಟಿಲ್ಲ. ಇತ್ತ ಅರಣ್ಯ ಇಲಾಖೆ ಈ ಭೂಮಿ ತನಗೆ ಸೇರಿದ್ದು ಎಂದು ಕಲ್ಲು ನೆಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ಕಂದಾಯ ಇಲಾಖೆ ತಪ್ಪಾಗಿ ವಿತರಣೆ ಮಾಡಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ಈ ಭಾಗದ ಜನರ ಜೀವನ ತುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಸಮಾಧಾನ ತೋಡಿಕೊಂಡರು.

    30 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಗ್ರಾಮದಲ್ಲಿ ಯಾರೇ ಸತ್ತರೂ ಹೂಳಲು ಸ್ಮಶಾನವಿಲ್ಲ. ಮನೆ ಕಟ್ಟಿಕೊಟ್ಟಿದ್ದರೂ ಹಕ್ಕುಪತ್ರ ನೀಡಿಲ್ಲ. ಗ್ರಾವಕ್ಕೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಬಸ್ ಬರುತ್ತಿದ್ದು ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.

    ಗ್ರಾಮದ ಹಿರಿಯ ಮಹಾಲಿಂಗಯ್ಯ ಮಾತನಾಡಿ, 70 ವರ್ಷಗಳ ಹಿಂದೆ ಚನ್ನಪಟ್ಟಣದ ಎಸ್ಟೇಟ್‌ನಲ್ಲಿ ಕೂಲಿ ಮಾಡುತ್ತಿದ್ದ ಪೂರ್ವಜರಿಗೆ ಸಾಗುವಳಿ ಪತ್ರ ಕೊಡಲಾಗಿದೆ. ಆದರೆ ಪೋಡು ಮಾಡಿಕೊಡದ ಕಾರಣ ಭೂಮಿಯ ಹಕ್ಕನ್ನು ಪಡೆದುಕೊಳ್ಳಲಾಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ವೋಟು ಕೇಳಲು ಬರುವ ರಾಜಕಾರಣಿಗಳು ಚುನಾವಣೆ ಮುಗಿದ ನಂತರ ನಮ್ಮ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಮತದಾನ ಬಹಿಷ್ಕಾರ ಮಾಡುವ ಕಠಿಣ ನಿರ್ಧಾರ ಕೈಗೊಳ್ಳುತ್ತಿದ್ದೇವೆ ಎಂದು ಹತಾಶೆ ವ್ಯಕ್ತಪಡಿಸಿದರು.

    ಮುಂಟೀಪುರ ಕಾಲನಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಮಾತನಾಡಿ, ಗ್ರಾಮದಲ್ಲಿ ಸೋಲಿಗ ಜನಾಂಗದವರೇ ವಾಸಿಸುತ್ತಿದ್ದು, ಹೊಸದಾಗಿ ಮನೆ ಕಟ್ಟಿಕೊಡುತ್ತಿಲ್ಲ. ಇದರಿಂದ ಇಕ್ಕಟ್ಟಿನಲ್ಲಿ ವಾಸಿಸುವಂತಾಗಿದೆ. ಹೊಸದಾಗಿ ಮನೆಕಟ್ಟಿಕೊಳ್ಳುವವರಿಗೆ ನಿವೇಶನಗಳಿಲ್ಲದೆ ರಸ್ತೆಯಲ್ಲಿಯೇ ಗುಡಿಸಲು ಹಾಕಿಕೊಂಡು ವಾಸಿಸುವಂತಾಗಿದೆ. ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಎರಡೂ ಗ್ರಾಮಗಳಿಂದ ಸುಮಾರು 400 ರೇಷನ್ ಕಾರ್ಡ್ ಇದ್ದರೂ ಆರು ಕಿಲೋ ಮೀಟರ್ ದೂರದ ಬರಗಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ತಲೆ ಮೇಲೆ ರೇಷನ್ ಚೀಲಗಳನ್ನು ಹೊತ್ತು ತರಬೇಕಾಗಿದೆ. ಜತೆಗೆ ವನ್ಯಜೀವಿಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ತಹಸೀಲ್ದಾರ್‌ಗೆ ಹಲವು ಬಾರಿ ಮನವಿ ಮಾಡಿದ್ದರೂ ಉಪಯೋಗವಾಗಿಲ್ಲ. ಆದ್ದರಿಂದ ಮುಂಟೀಪುರ ಗ್ರಾಮಸ್ಥರ ಜತೆಗೂಡಿ ಬಹಿಷ್ಕಾರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts