More

    ದಶಕಗಳೇ ಕಳೆದರೂ ಸಿಗದ ಹಕ್ಕುಪತ್ರ !

    ಹುಣಸೂರು: ಆದಿವಾಸಿ ಸಮುದಾಯದ ಜೇನುಕುರುಬರಿಗಾಗಿ ಸರ್ಕಾರವೇ ಮುಂದೆ ನಿಂತು ಮನೆ ನಿರ್ಮಿಸಿಕೊಟ್ಟಿದೆಯಾದರೂ ದಶಕಗಳೇ ಕಳೆದರೂ ಫಲಾನುಭವಿಗೆ ಹಕ್ಕುಪತ್ರ ಮಾತ್ರ ಸಿಕ್ಕಿಲ್ಲ.

    ತಾಲೂಕಿನ ಹನಗೋಡು ಹೋಬಳಿ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ಮಾಳದ 30 ಜೇನುಕುರುಬ ಸಮುದಾಯದ ಕುಟುಂಬಗಳ ದುರಂತ ಕಥೆ ಇದು. ಈ ಮನೆ ನಿಮ್ಮದಲ್ಲ, ಬೇರೆಯವರು ಬಂದರೆ ಖಾಲಿ ಮಾಡಿಕೊಂಡು ಹೋಗಬೇಕು ಎಂಬ ಗುಲ್ಲು ಹಬ್ಬಿದ ಪರಿಣಾಮ ಡೋಲಾಯಮಾನ ಸ್ಥಿತಿಯಲ್ಲಿ ಈ ಕುಟುಂಬಗಳು ಜೀವನ ಸಾಗಿಸುವಂತಾಗಿದೆ.

    ಅರ್ಧಶತಮಾನದಿಂದ ಇದ್ದಾರೆ: ಮುತ್ತುರಾಯನಹೊಸಳ್ಳಿ ಗ್ರಾಮದ ಸರ್ವೇ ನಂ.90ರ 1,612.05 ಎಕರೆ ಪ್ರದೇಶದ ಒಂದು ಭಾಗದಲ್ಲಿ 50 ವರ್ಷಗಳ ಹಿಂದೆ ಗುಡಿಸಲು ಕಟ್ಟಿಕೊಂಡು ಬದುಕಿನ ಜಟಕಾಬಂಡಿ ಎಳೆದುಕೊಂಡು ಬರುತ್ತಿದೆ ಈ ಜೇನುಕುರುಬ ಕುಟುಂಬಗಳು. ಕೂಲಿ ಮಾಡಿ ಬದುಕುವುದೇ ಇವರ ಜೀವನಕಥೆ.

    ಇಂತಹ ಬಡಜನರಿಗೆ ತಲೆಗೊಂದು ಶಾಶ್ವತ ಸೂರಿಗಾಗಿ 2012ರ ಆಗಸ್ಟ್‌ನಲ್ಲಿ ಅಂದಿನ ತಾಲೂಕು ಮಟ್ಟದ ಅಧಿಕಾರಿಗಳಾದ ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ವಸತಿ ಸೌಲಭ್ಯಕ್ಕಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿ 2012ರ ಸೆ.22ರಂದು ಅಂದಿನ ಸಮಾಜ ಕಲ್ಯಾಣ ಇಲಾಖೆ(ಇಂದು ಸಮಾಜ ಕಲ್ಯಾಣ ಮತ್ತು ಗಿರಿಜನಕಲ್ಯಾಣ ಇಲಾಖೆಯೆಂದು ವಿಭಜಿಸಲಾಗಿದೆ) ಗುರುತಿಸಿದ್ದ 30 ಫಲಾನುಭವಿಗಳಿಗೆ ಸರ್ವೇ ನಂ.90ರಲ್ಲಿ 2-34 ಎಕರೆ ಭೂಮಿಯನ್ನು ಮೀಸಲಿರಿಸಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಆದೇಶಿಸಿದ್ದರು. ಇದೇ ವೇಳೆ ಜಿಲ್ಲಾದ್ಯಂತ ಜೇನುಕುರುಬ ಸಮಾಜಕ್ಕೆ ಒಟ್ಟು ಒಟು 627 ಮನೆಗಳು ಮಂಜೂರಾಗಿದ್ದವು.

    ಮನೆಯಾದರೂ ಮಾಲೀಕತ್ವದ ಹಕ್ಕಾಗಿಲ್ಲ: ಪ್ರತಿ ಮನೆಗೆ 1.25 ಲಕ್ಷ ರೂ.ವೆಚ್ಚದಡಿ ಎರಡು ವರ್ಷಗಳೊಳಗೆ ಯೋಜನೆ ಪೂರ್ಣಗೊಳಿಸಿ ತದನಂತರ ಕಂದಾಯ ಇಲಾಖೆ ಅದನ್ನು ಸ್ಥಳೀಯ ಆಡಳಿತಕ್ಕೆ(ಗಾ.ಪಂ. ಅಥವಾ ಪುರಸಭೆ, ನಗರಸಭೆ ಇತ್ಯಾದಿ)ಸುಪರ್ದಿಗೆ ಒಪ್ಪಿಸುವುದು ವಾಡಿಕೆ. ಆದರೆ ಈ ಪ್ರಕರಣದಲ್ಲಿ ಕಂದಾಯ ಇಲಾಖೆ ಈ ಕಾರ್ಯವನ್ನು ಮಾಡಿದೆಯೋ ಇಲ್ಲವೋ ತಿಳಿದುಬಂದಿಲ್ಲ. ಇನ್ನು ಗ್ರಾಮಾಭಿವೃದ್ಧಿ ಇಲಾಖೆಯೂ ಈ ಕುರಿತು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

    ಷರತ್ತು ಕಾರಣವಾಯಿತೇ?: ಹಸ್ತಾಂತರ ಪ್ರಕ್ರಿಯೆ ಕುರಿತು ಗೊಂದಲ ಒಂದಡೆ ಇದ್ದರೆ ಹಕ್ಕುಪತ್ರ ಸಿಗದಿರಲು ಇನ್ನೊಂದು ಪ್ರಮುಖ ಕಾರಣವೂ ಕಂಡುಬರುತ್ತಿದೆ. 2012ರಲ್ಲಿ ಜಿಲ್ಲಾಧಿಕಾರಿ ನೀಡಿರುವ ಆದೇಶ ಪತ್ರದಲ್ಲಿ ವಿಧಿಸಿರುವ ಮೂರು ಷರತ್ತುಗಳ ಪೈಕಿ ಮೊದಲನೆಯ ಷರತ್ತು ಸಾಕಷ್ಟು ಗೊಂದಲಕ್ಕೆ ಕಾರಣವಾಗಿರಬಹುದು. ಅದೆಂದರೆ ಸದರಿ ಜಮೀನಿನ ಪೂರ್ಣಹಕ್ಕು ಸರ್ಕಾರಕ್ಕೆ ಸೇರಿದ್ದಾಗಿದೆ ಎನ್ನುವ ಷರತ್ತು ಅಧಿಕಾರಿಗಳನ್ನು ಹಿಂದಡಿ ಇಡುವಂತೆ ಮಾಡಿದೆಯೇ ಅಥವಾ ಸಂಪೂರ್ಣ ಹಕ್ಕು ನೀಡುವತ್ತ ಗಮನಹರಿಸದಂತೆ ಮಾಡಿದೆಯೆ ಎನ್ನುವುದು ತಿಳಿದುಬರುತ್ತಿಲ್ಲ. ಮಿಕ್ಕಂತೆ ಜಮೀನನ್ನು ಬೇರಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ.ಅಲ್ಲದೆ ಕಂದಾಯ ಇಲಾಖೆಯ ಪೂರ್ವಾನುಮತಿಯಲ್ಲದೇ ಬೇರಾವುದೇ ಉದ್ದೇಶಕ್ಕೂ ಬಳಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

    ಶಿಥಿಲಾವಸ್ಥೆಯಲ್ಲಿ ಮನೆಗಳು: 30 ಮನೆಗಳಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಿರ್ಮಿತಿ ಕೇಂದ್ರದಿಂದ ಮನೆ, ರಸ್ತೆ, ಚರಂಡಿ ಮತ್ತು ಶೌಚಗೃಹಗಳನ್ನು ನಿರ್ಮಿಸಿಕೊಡಲಾಗಿದೆ. ಪ್ರಸ್ತುತ ಈ ಮನೆಗಳು ಶಿಥಿಲಾವಸ್ಥೆ ತಲುಪಿವೆ. ಆದರೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಎಲ್ಲವನ್ನೂಒದಗಿಸಲಾಗಿದೆ. ಇದೀಗ ಗ್ರಾ,ಪಂ.ಗೆ ತಲಾ 2 ಸಾವಿರ ರೂ.ನಂತೆ ಕಂದಾಯವನ್ನೂ ಫಲಾನುಭವಿಗಳು ಕಟ್ಟಿದ್ದಾರೆ. ಹೀಗಿದ್ದೂ ತಮಗೆ ಹಕ್ಕುಪತ್ರ ಸಿಗುತ್ತಿಲ್ಲವೆನ್ನುವುದೇ ಫಲಾನುಭವಿಗಳ ಆತಂಕ.

    ಒತ್ತುವರಿ ಗುಮ್ಮ?: ಸರ್ಕಾರ 2.34 ಎಕರೆ ಭೂಮಿಯನ್ನು ಮೀಸಲಿಟ್ಟಿದ್ದು, ಈ ಪೈಕಿ 30 ಮನೆಗಳನ್ನು ನಿರ್ಮಿಸಿದ್ದು, ಜಾಗವೂ ಉಳಿದಿದೆ ಎನ್ನಲಾಗಿದೆ. ಹಾಗಿದ್ದರೆ ಈ ಜಾಗ ಏನಾಗಿದೆ? ಒತ್ತುವರಿಯಾಗಿದೆಯೇ? ಇಲ್ಲದಿದ್ದರೆ ಅಂಗನವಾಡಿ ಇತರ ಕಟ್ಟಡಗಳನ್ನು ಕಟ್ಟಲು ಅವಕಾಶ ನೀಡಬಹುದಲ್ಲ ಎಂಬಿತ್ಯಾದಿ ಪ್ರಶ್ನೆಗಳು ಸಮುದಾಯದವರನ್ನು ಕಾಡುತ್ತಿದೆ. ಮನೆಯಲ್ಲಿ ನಾವಿದ್ದರೂ ಮನೆ ನಮ್ಮದಲ್ಲ ಎನ್ನುವ ಅನಾಥಪ್ರಜ್ಞೆ ಮುಗ್ಧ ಗಿರಿಜನರನ್ನು ಕಾಡುತ್ತಿದ್ದು ಶಾಶ್ವತ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.

    ಮಂಗಳೂರು ಮಾಳದ ಗಿರಿಜನರ ಸಮಸ್ಯೆ ಕುರಿತು ಈಗಾಗಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ತಹಸೀಲ್ದಾರ್‌ರಿಗೆ ಪತ್ರ ಮುಖೇನ ಮತ್ತು ಮೌಖಿಕವಾಗಿಯೂ ಮಾಹಿತಿ ನೀಡಲಾಗಿದೆ. ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದು, ಸಮಸ್ಯೆ ಪರಿಹಾಕಕ್ಕೆ ಕ್ರಮ ವಹಿಸಲು ತಹಸೀಲ್ದಾರರಿಗೆ ಕೋರಲಾಗಿದೆ.
    ಎಚ್.ಸಿ.ಬಸವರಾಜು, ಸಹಾಯಕ ನಿರ್ದೇಶಕ, ಗಿರಿಜನ ಕಲ್ಯಾಣ ಇಲಾಖೆ, ಹುಣಸೂರು

    2-3 ತಲೆಮಾರುಗಳಿಂದ ಬದುಕುತ್ತಿದ್ದೇವೆ. ಇದೀಗ ಮನೆಯೂ ಬೀಳುವ ಹಂತ ತಲುಪಿದೆ. ಅಧಿಕಾರಿಗಳು ಮನೆ ನಿಮ್ಮದಲ್ಲ. ನೀವಿದ್ದಷ್ಟು ದಿನ ಮಾತ್ರ ನಿಮ್ಮದು ಎಂದು ತಿಳಿಸುತ್ತಿದ್ದಾರೆ. ಈ ವಿಷಯ ನಮಗೆ 3 ತಿಂಗಳ ಹಿಂದಷ್ಟೇ ತಿಳಿಯಿತು. ನಿಮ್ಮ ಗ್ರಾಮ ನಮ್ಮ ಗ್ರಾ.ಪಂ.ವ್ಯಾಪ್ತಿಗೆ ಸೇರಿಲ್ಲ ಎಂದು ಪಿಡಿಒ ಹೇಳುತ್ತಾರೆ. ಮನೆ ಇಲ್ಲದಿದ್ದರೆ ಕುಟುಂಬಗಳು ಬೀದಿಪಾಲಾಗಲಿವೆ. ಕೂಲಿನಾಲಿ ಮಾಡಿ ಬದುಕುವ ನಾವು ಎಲ್ಲಿ ಹೋಗಬೇಕು ಹೇಳಿ? ದಯವಿಟ್ಟು ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಲಿ.
    ಲಕ್ಷ್ಮಮ್ಮ, ಜೇನುಕುರುಬ ಮಹಿಳೆ, ಮಂಗಳೂರು ಮಾಳ

    ಇತ್ತೀಚೆಗೆ ಹುಣಸೂರು ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಮಂಗಳೂರು ಮಾಳದ ಜೇನುಕುರುಬರ ಸಮಸ್ಯೆ ಕುರಿತು ಸಾಕಷ್ಟು ಮಾಹಿತಿ ಪಡದಿದ್ದೇನೆ. ಮೂರು ಇಲಾಖೆಗಳನ್ನು ಒಳಗೊಂಡು ಶೀಘ್ರ ಸಭೆಯನ್ನು ಆಯೋಜಿಸಿ ಸಮಸ್ಯೆಗಳ ಕುರಿತು ಪರಾಮರ್ಶೆ ನಡೆಸಿ ಪರಿಹಾರೋಪಾಯ ಕೈಗೊಳ್ಳಲಾಗುವುದು. ಗಿರಿಜನರು ಆತಂಕ ಪಡಬೇಕಿಲ್ಲ.
    ಮಂಜುನಾಥ್, ತಹಸೀಲ್ದಾರ್, ಹುಣಸೂರು

    ಸರ್ಕಾರದ ನಿರ್ದೇಶನದಂತೆ 30 ಕುಟುಂಬಗಳಿಗೆ ಅಗತ್ಯ ಕುಡಿಯುವ ನೀರು, ಸೀಮೆಂಟ್ ರಸ್ತೆ, ಚರಂಡಿ, ಬೀದಿದೀಪದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಸರ್ಕಾರದ ನಿರ್ದೇಶನದಂತೆ ಅವರಿಗೆ ಹಕ್ಕುಪತ್ರ ನೀಡಲು ಅವಕಾಶವಿಲ್ಲ. ಹಾಗಾಗಿ ಹಕ್ಕುಪತ್ರ ನೀಡಲಾಗಿಲ್ಲ.
    ಬಿ.ಕೆ.,ಮನು, ಇಒ, ತಾಲೂಕು ಪಂಚಾಯಿತಿ ಹುಣಸೂರು

    ಮಂಗಳೂರುಮಾಳದ 30 ಕುಟುಂಬಗಳಿಗೆ ದಶಕಗಳಿಂದ ಮನೆಯ ಹಕ್ಕುಪತ್ರ ಸಿಕ್ಕಿಲ್ಲವೆನ್ನುವ ವಿಷಯ ತಿಳಿದಿದ್ದೇನೆ. ಸರ್ಕಾರ ವಿಧಿಸಿರುವ ಷರತ್ತು ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಷರತ್ತನ್ನು ಸಡಿಲಗೊಳಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವತ್ತ ಕ್ರಮವಹಿಸುತ್ತೇನೆ. ಫಲಾನುಭವಿಗಳು ಆತಂಕ ಪಡಬೇಕಿಲ್ಲ.
    ಜಿ.ಡಿ.ಹರೀಶ್‌ಗೌಡ ಶಾಸಕ, ಹುಣಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts