More

    ಮೃತಪಟ್ಟಿದ್ದ ಬಾಲಕಿಗೆ ಕೋವಿಡ್ ದೃಢ

    ಮುರಗೋಡ: ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಪೋಸ್ಟ್ ಗಲ್ಲಿಯೊಂದರ ಮನೆಯಲ್ಲಿ 8 ದಿನದ ಹಿಂದೆ ವಿಪರೀತ ಜ್ವರ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲಿ, ಚಿಕಿತ್ಸೆಗೆ ಸ್ಪಂದಿಸದೆ ಬೈಲಹೊಂಗಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ 12 ವರ್ಷದ ಬಾಲಕಿಗೆ ಕರೊನಾ ಸೋಂಕು ದೃಢಪಟ್ಟಿದೆ.

    ಬಾಲಕಿ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ 150ಕ್ಕೂ ಅಧಿಕ ಜನರಿಗೆ ಇದೀಗ ಕರೊನಾತಂಕ ಆವರಿಸಿದೆ. ಮೃತ ಬಾಲಕಿಗೆ ವೈರಸ್ ದೃಢವಾಗಿದ್ದರಿಂದ ಟಾಸ್ಕ್ ೆರ್ಸ್ ಕಮಿಟಿ ಸ್ಥಳೀಯ ಖಾಸಗಿ ಆಸ್ಪತ್ರೆ ಹಾಗೂ ಬಾಲಕಿ ಮನೆ ಸುತ್ತಲಿನ ಪ್ರದೇಶವನ್ನು ಶನಿವಾರ ಸೀಲ್‌ಡೌನ್ ಮಾಡಿದೆ. ಪ್ರಾಥಮಿಕ ಸಂಪರ್ಕ ಹೊಂದಿದವರ ಬಗ್ಗೆ ಮಾಹಿತಿ ಪಡೆದು, ಸ್ವಯಂ ಪ್ರೇರಣೆಯಿಂದ ಹೋಂ ಕ್ವಾರಂಟೈನ್‌ಗೆ ಒಳಗಾಗಲು ಸಾರ್ವಜನಿಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.

    8 ದಿನದ ಬಳಿಕ ವರದಿ: ಜು. 11ರಂದು ವಿಪರೀತ ಜ್ವರ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೈಲಹೊಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಳು. ಬಳಿಕ ಅವಳ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. 8 ದಿನಗಳ ಬಳಿಕ ಬಂದ ವರದಿಯಲ್ಲಿ ಅವಳಿಗೆ ಕರೊನಾ ವೈರಸ್ ದೃಢಪಟ್ಟಿದೆ.

    150ಕ್ಕೂ ಹೆಚ್ಚು ಜನ ಭಾಗಿ: ಮೃತ ಬಾಲಕಿಯ ಅಂತ್ಯಕ್ರಿಯೆಯನ್ನು ಜು. 12ರಂದು ಗ್ರಾಮದ ರುದ್ರಭೂಮಿಯಲ್ಲಿ ಮಾಡಲಾಗಿತ್ತು. ಅಂತ್ಯ ಸಂಸ್ಕಾರದಲ್ಲಿ 150ಕ್ಕೂ ಅಧಿಕ ಜನರು ಭಾಗಿಯಾಗಿದ್ದು, ಅವರಿಗೆಲ್ಲ ಇದೀಗ ಕರೊನಾ ವೈರಸ್ ಭೀತಿ ಆವರಿಸಿದೆ. ಕರೊನಾ ಸೇನಾನಿಗಳು ಮೃತ ಬಾಲಕಿಯ ಸಂಪರ್ಕಿತರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತ ಬಾಲಕಿ ಮನೆ ಸುತ್ತ ಸ್ಯಾನಿಟೈಸ್ ಮಾಡಲಾಗಿದೆ.

    ಮೃತಪಟ್ಟ ಬಾಲಕಿಯ ಕೋವಿಡ್-19 ವರದಿಯು 8 ದಿನಗಳ ಬಳಿಕ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಯಾವುದೇ ವ್ಯಕ್ತಿ ಮೃತಪಟ್ಟರೆ ಕೋವಿಡ್-19 ವರದಿ ಬರುವವರೆಗೆ ಶವ ಸಂಸ್ಕಾರ ಮಾಡಬಾರದು. ಆದರೆ, ಮುರಗೋಡ ಗ್ರಾಮದಲ್ಲಿ ನಡೆದಿರುವ ಘಟನೆ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು.
    | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts