More

    ಮಹಿಳೆಯರಿಗೆ ತಲಾ1 ಲಕ್ಷ ರೂ. ಸಾಲ ; ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಭರವಸೆ ಸ್ವ-ಸಹಾಯ ಸಂಘಗಳಿಗೆ ಸೌಲಭ್ಯ ವಿತರಣೆ

    ಶಿಡ್ಲಘಟ್ಟ: ಖಾಸಗಿ ಬಡ್ಡಿ ಮಾಫಿಯಾಕ್ಕೆ ನಿಯಂತ್ರಣ ಸೇರಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ವಿತರಿಸಲಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ನಗರದ ಡಾಲ್ಫಿನ್ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಡಿಸಿಸಿ ಬ್ಯಾಂಕ್ ಹಾಗೂ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೆಲ ವರ್ಷಗಳ ಹಿಂದೆ ಬಹಳಷ್ಟು ಸಹಕಾರ ಸಂಘಗಳು ಕೇವಲ ಪಡಿತರ ವಿತರಣೆಗಷ್ಟೇ ಸೀಮಿತವಾಗಿದ್ದವು, ಯಾವುದೇ ಸಾಲ ನೀಡಲು ಶಕ್ತಿಯಿರಲಿಲ್ಲ. ಆದರೆ ಈಗ ಬ್ಯಾಂಕ್ ಆರ್ಥಿಕವಾಗಿ ಸಬಲವಾಗಿದ್ದು ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ವರ್ಗಗಳ ಮಹಿಳೆಯರಿಗೂ ತಲಾ 1 ಲಕ್ಷ ರೂ. ಸಾಲ ನೀಡುವ ಭರವಸೆ ನೀಡಿದರು.

    ಸಕಾಲದಲ್ಲಿ ಸಾಲ ಮರುಪಾವತಿಸುವಲ್ಲಿ ಮಹಿಳೆಯರು ಪ್ರಾಮಾಣಿಕರಾಗಿದ್ದು ಅವರಿಗೆ ಸಾಲ ನೀಡುವುದಲ್ಲದೆ ಬ್ಯಾಂಕ್‌ನಿಂದ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸಲು ಡಿಸಿಸಿ ಬ್ಯಾಂಕ್ ಸದಾ ಸಿದ್ಧವಾಗಿದೆ ಎಂದರು.
    ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕ್ ನೀಡುತ್ತಿರುವ ಬಡ್ಡಿರಹಿತ ಸಾಲ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರುಪಾವತಿಸಬೇಕೆಂದು ಮಹಿಳಾ ಸ್ವಸಹಾಯ ಸಂಘಗಳಿಗೆ ಶಾಸಕ ವಿ.ಮುನಿಯಪ್ಪ ಸೂಚನೆ ನೀಡಿದರು.

    45 ಮಹಿಳಾ ಸ್ವ-ಸಹಾಯ ಸಂಘಗಳಿಗೆ 2.8 ಕೋಟಿ ರೂ. ಬಡ್ಡಿರಹಿತ ಸಾಲ ವಿತರಣೆ ಮಾಡಲಾಯಿತು. ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ವೇಣುಗೋಪಾಲ್, ನರಸಿಂಹಮೂರ್ತಿ, ಕಾಂತರಾಜು, ವೆಂಕಟೇಶಪ್ಪ, ಲಕ್ಷ್ಮಿನಾರಾಯಣ, ಮಾಜಿ ಅಧ್ಯಕ್ಷ ಶೆಟ್ಟಹಳ್ಳಿ ರಾಮಚಂದ್ರಪ್ಪ, ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕ ಶ್ರೀನಾಥ್, ಟೌನ್ ಎಸ್‌ಎಫ್‌ಸಿಎಸ್ ಕಾರ್ಯನಿರ್ವಹಣಾಧಿಕಾರಿ ದೇವಿಕಾ ಹಾಗೂ ಇತರರಿದ್ದರು.

    20 ಕೋಟಿ ರೂ. ಸಾಲ: ಮುಚ್ಚುವ ಹಂತದಲ್ಲಿದ್ದ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘ ಕಳೆದ 5 ವರ್ಷದ ಅವಧಿಯಲ್ಲಿ ಆಡಳಿತ ಮಂಡಳಿ ಸಹಕಾರದಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸುಮಾರು 20 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿದೆ ಎಂದು ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts