More

    ಜನರ ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ ; ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಡಿಸಿ ವೈ.ಎಸ್. ಪಾಟೀಲ ಭರವಸೆ

    ಕೊರಟಗೆರೆ: ಸಾರ್ವಜನಿಕರು ಪ್ರಸ್ತಾಪಿಸುವ ಎಲ್ಲ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಸಾಧ್ಯವಾಗದು. ಕೆಲವೊಂದು ಕಾನೂನಿನ ಪರಿಮಿತಿ ಇದಕ್ಕೆ ಕಾರಣವಾಗುತ್ತದೆ. ಆದರೆ, ಜನರು ಪ್ರಸ್ತಾಪಿಸುವ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

    ಕೋಳಾಲ ಹೋಬಳಿಯ ದೊಡ್ಡಪಾಲನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ನೀತಿ, ನಿಯಮಗಳ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ಗ್ರಾಮಸ್ಥರು ತಮಗೆ ನೀಡುತ್ತಿರುವ ಆದರ ಆತಿಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಸೀಲ್ದಾರ್ ನಹೀದಾ ಜಮ್ ಜಮ್, ಗ್ರೇಡ್-2 ತಹಸೀಲ್ದಾರ್ ನರಸಿಂಹಮೂರ್ತಿ, ಕಂದಾಯ ನಿರೀಕ್ಷಕ ಪ್ರತಾಪ್, ತಾಪಂ ಯೋಜನಾ ನಿರ್ದೇಶಕಿ ದೀಪಶ್ರೀ, ಗ್ರಾಪಂ ಅಧ್ಯಕ್ಷೆ ಗಂಗಾದೇವಿ, ಉಪಾಧ್ಯಕ್ಷ ಕಿರಣ್ ಮತ್ತಿತರರಿದ್ದರು.

    ಬಗರ್ ಹುಕುಂನಲ್ಲಿ ಭಾರಿ ಗೊಂದಲ: ಬಗರ್ ಹುಕುಂನಡಿ ಸಾಗುವಳಿ ಚೀಟಿ ಪಡೆಯಲು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಒಟ್ಟು 160 ಅರ್ಜಿಗಳು ಸಲ್ಲಿಕೆಯಾಗಿವೆ. ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿಗಳು ಈ ಅರ್ಜಿಗಳನ್ನು ಪರಿಶೀಲಿಸಿ, ಮಂಜೂರಾತಿ ನೀಡಲಿವೆ. ಜಮೀನು ಇದ್ದವರು ಬಗರ್ ಹುಕುಂನಡಿ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

    ಅನಧಿಕೃತ ಒತ್ತುವರಿ ತೆರವು: ಬಗರ್ ಹುಕುಂನಡಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಹಲವು ಭಾಗಗಳಲ್ಲಿ ಗಡಿ ಬಗ್ಗೆ ರೈತರು ಮತ್ತು ಅಧಿಕಾರಿಗಳ ನಡುವೆ ವಿವಾದಗಳಿವೆ. ಈ ವಿವಾದಗಳನ್ನು ಬಗೆಹರಿಸಲಾಗುವುದು ಎಂದು ವೈ.ಎಸ್.ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts