More

    ಜಿಲ್ಲಾಡಳಿತದಿಂದ ಕನಕಾಚಲಪತಿ ಕಲ್ಯಾಣೋತ್ಸವ

    ಕನಕಗಿರಿ: ಕಳೆದ ತಿಂಗಳಷ್ಟೇ ಕನಕಗಿರಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದ ಜಿಲ್ಲಾಡಳಿತದ ಅಧಿಕಾರಿಗಳಿಂದ ಭಾನುವಾರ ಬೆಳಗಿನ ಜಾವ ಐತಿಹಾಸಿಕ ಶ್ರೀ ಕನಕಾಚಲ ಜಾತ್ರಾ ಮಹೋತ್ಸವ ಅಂಗವಾಗಿ ಕನಕಾಚಲಪತಿಯ ಕಲ್ಯಾಣೋತ್ಸವ ನಡೆದಿದ್ದು, ಈ ಬಾರಿಯ ಜಾತ್ರೆಯ ವಿಶೇಷಗಳಲ್ಲೊಂದಾಗಿದೆ.

    ಕಣ್ಣಿದ್ದವರು ಕನಕಗಿರಿ ನೋಡಬೇಕೆಂಬ ನಾಣ್ಣುಡಿಯಂತೆ ಕನಕಗಿರಿಯ ಜಾತ್ರಾ ಮಹೋತ್ಸವದಲ್ಲಿ ಕಲ್ಯಾಣೋತ್ಸವ ಹಾಗೂ ಅದರ ಬಳಿಕ ನಡೆಯುವ ಗರುಡೋತ್ಸವವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಎರಡನೇ ತಿರುಪತಿ ಎನ್ನುವ ಹೆಸರು ಪಡೆದಿರುವ ಕನಕಗಿರಿಯಲ್ಲಿ ತಿರುಪತಿಯಲ್ಲಿ ನಡೆಯುವಂತೆಯೇ ಇಲ್ಲಿಯೂ ಸಹ ಜಾತ್ರಾ ಕಾರ್ಯಕ್ರಮಗಳು ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ.

    ಕಲ್ಯಾಣೋತ್ಸವದಲ್ಲಿ ಕನಕಾಚಲಪತಿಗೆ ಶ್ರೀದೇವಿ, ಭೂದೇವಿಯನ್ನು ಧಾರೆ ಎರೆಯುವುದು ಸ್ಥಳೀಯ ಶಾಸಕರಿಂದ ನಡೆಯುತ್ತದೆ. ಆದರೆ, ಚುನಾವಣೆಯ ನೀತಿ ಸಂಹಿತೆಯಿದ್ದಲ್ಲಿ ಮಾತ್ರ ಅಧಿಕಾರಿ ವರ್ಗಕ್ಕೆ ಇಂಥ ಅವಕಾಶ ದೊರೆಯುತ್ತದೆ. ಈ ಸಲದ ಜಾತ್ರೆಯಲ್ಲಿ ಖುದ್ದು ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್‌ಪಿ ಯಶೋದಾ ವಂಟಗೋಡಿ ಅವರ ಕುಟುಂಬದವರಿಂದ ಮತ್ತು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ಅಚ್ಚುಕಟ್ಟಾಗಿ ನಡೆಯಿತು.

    ಭಾನುವಾರ ಬೆಳಗಿನ ಜಾವ ಸುಮಾರು ಎರಡು ಗಂಟೆಯಿಂದ ಆರಂಭವಾದ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳಲು ಡಿಸಿ ನಲಿನ್ ಅತುಲ್ ಅವರು ಪತ್ನಿ ಶಿಲ್ಪಾ ಸಮೇತರಾಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರು ಪತಿ ಸುನೀಲ್ ವಂಟಗೋಡಿ ಹಾಗೂ ಇಬ್ಬರು ಮಕ್ಕಳು 12.30ಕ್ಕೆ ಆಗಮಿಸಿದ್ದರು. ತಹಸೀಲ್ದಾರ್ ವಿಶ್ವನಾಥ ಮುರುಡಿ ಅವರೂ ಪತ್ನಿ ಹಾಗೂ ಮಗಳೊಂದಿಗೆ ಅಧಿಕಾರಿಗಳ ಕುಟುಂಬದೊಂದಿಗೆ ಸೇರಿದರು.

    ಸುಮಾರು ಎರಡು ಗಂಟೆಗಳ ಕಾಲ ನಡೆದ ಕಲ್ಯಾಣೋತ್ಸವದಲ್ಲಿ ಶ್ರೀದೇವಿ ಭೂದೇವಿಯನ್ನು ಈ ಕುಟುಂಬಗಳು ಧಾರೆ ಎರೆದುಕೊಟ್ಟವು. ಕಲ್ಯಾಣೋತ್ಸವದ ಬಳಿಕ ನಡೆದ ಗರುಡೋತ್ಸವವನ್ನು ಮೂರು ಕುಟುಂಬಗಳು ದೇವಸ್ಥಾನದ ಎದುರಿಗೆ ಇರುವ ರಾಜ ಪುರೋಹಿತರ ಮನೆ ಮುಂಭಾಗದಲ್ಲಿ ನಿಂತು ಕಣ್ತುಂಬಿಕೊಂಡರು. ಕರ್ತವ್ಯದ ನಡುವೆ ಖುಷಿಯಿಂದಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸಪಟ್ಟರು.

    ಮಗುವಿನೊಂದಿಗೆ ಆಟ, ಸಾಂಪ್ರದಾಯಿಕ ಉಡುಗೆ

    ಜಿಲ್ಲಾಧಿಕಾರಿ ನಲಿನ್ ಅತುಲ್ ಸೇರಿ ಎಸ್‌ಪಿ ಯಶೋದಾ ವಂಟಗೋಡಿ ಕುಟುಂಬ ಗರುಡೋತ್ಸವ ವೀಕ್ಷಣೆಗೆಂದು ರಾಜಪುರೋಹಿತರ ಮನೆಯ ಮುಂಭಾಗದಲ್ಲಿ ನಿಂತಿದ್ದಾಗ ಅಲ್ಲೇ ಇದ್ದ ಪುಟಾಣಿ ಮಹಿಮಾ ಮಾಂತಗೊಂಡ ಎನ್ನುವ ಮಗುವೊಂದನ್ನು ಡಿಸಿ ಹಾಗೂ ಅವರ ಪತ್ನಿ ಎತ್ತಿಕೊಂಡು ಆಟವಾಡುತ್ತಿರುವುದು ನೆರೆದಿದ್ದವರ ಗಮನ ಸೆಳೆಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆ ಮಗುವಿನೊಂದಿಗೆ ಆಟವಾಡಿದರು. ನಲಿನ್ ಅತುಲ್ ಅವರು ಈಶಾನ್ಯ ರಾಜ್ಯಗಳ ಬಟ್ಟೆ ತೊಟ್ಟು, ತಲೆಯ ಮೇಲೆ ಟೋಪಿಯೊಂದಿಗೆ ಆಗಮಿಸಿ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದರು. ಬಹುತೇಕ ಖಾಕಿ ಬಟ್ಟೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಯಶೋದಾ ವಂಟಗೋಡಿ ಅವರು ಸಾಂಪ್ರದಾಯಿಕ ಉಡುಗೆಯುಟ್ಟಿದ್ದರು. ತಹಸಿಲ್ ಕಚೇರಿಯಿಂದ ಭಾಜಾ ಭಾಜಂತ್ರಿಯೊಂದಿಗೆ ಇವರನ್ನು ದೇವಸ್ಥಾನದವರೆಗೆ ಕರೆ ತರಲಾಯಿತು.

    ಕೆಲಸದ ನಡುವೆ ದೇವರ ಕಾರ್ಯ ಮಾಡಲಿಕ್ಕೆ ಅವಕಾಶ ದೊರೆತಿದೆ. ಖುಷಿ ಹಾಗೂ ಭಕ್ತಿಯಿಂದಲೇ ಕಲ್ಯಾಣೋತ್ಸವ ನಡೆಸಿಕೊಟ್ಟಿದ್ದೇವೆ.
    ಯಶೋದಾ ವಂಟಗೋಡಿ
    ಎಸ್‌ಪಿ, ಕೊಪ್ಪಳ

    ಕಲ್ಯಾಣೋತ್ಸವ ಕಾರ್ಯಕ್ರಮ ಸುಂದರವಾಗಿತ್ತು. ಕುಟುಂಬ ಸಮೇತರಾಗಿ ಆಗಮಿಸಿ ಕನ್ಯಾದಾನ ಮಾಡಿದ್ದೇವೆ. ಇದೊಂದು ವಿಶೇಷ ರೀತಿಯ ಅನುಭವವಾಗಿದೆ.
    ನಲಿನ್ ಅತುಲ್
    ಡಿಸಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts