More

    ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ

    ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ: ಮಹಾರಾಷ್ಟ್ರದ ದಾದರ್‌ನಗರದ ಡಾ.ಬಿ.ಆರ್.ಅಂಬೇಡ್ಕರ್ ರಾಜಗೃಹ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಮಹಾರಾಷ್ಟ್ರ ಸರ್ಕಾರ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮಹಾನಗರ ಎಸ್‌ಸಿ ಘಟಕ, ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಹಾಗೂ ಲಖಿಸಾ ಬಂಜಾರಾ ಸೇವಾ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.

    ಸಮಾಜದಲ್ಲಿ ಶಾಂತಿ ಕದಡುವ ದೃಷ್ಟಿಯಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಆದರೆ, ಮಹಾರಾಷ್ಟ್ರ ಸರ್ಕಾರ ಈವರೆಗೂ ಅವರ ಬಂಧನಕ್ಕೆ ಮುಂದಾಗದಿರುವುದು ಸರಿಯಲ್ಲ. ಕೂಡಲೇ ಎಚ್ಚೆತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

    ಈ ಮೊದಲಿನಂತೆ ರಾಜಗೃಹ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು. ಮಂಜುನಾಥ ಪಮ್ಮಾರ, ಶ್ರೀಶೈಲ ಕಾಂಬಳೆ, ಯಲ್ಲೇಶ ಕೋಲಕಾರ, ರಾಜಕುಮಾರ ಚೌಗಲೆ, ಮಹೇಶ ಶೀಗಿಹಳ್ಳಿ, ಪ್ರವೀಣ ಚವ್ಹಾಣ ಇತರರು ಇದ್ದರು.

    ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್)ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ನರ್ಸಿಂಗ್ ಸಿಬ್ಬಂದಿ ಪ್ರತಿಭಟಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಕರೊನಾ ಸಂಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು, ಕೆಲಸ ಮಾಡಿದ್ದೇವೆ. ಆದರೆ, ಸರ್ಕಾರ ನಮಗೆ ನೀಡುತ್ತಿರುವ ಮಾಸಿಕ 10 ಸಾವಿರ ರೂ. ವೇತನದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ, ನಮ್ಮ ಕೆಲಸ ಆಧರಿಸಿ ವೇತನವನ್ನೂ ಹೆಚ್ಚಿಸುವ ಜತೆಗೆ, ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಚಂದ್ರಕಾಂತ ಶಿರಸಂಗಿ, ಶ್ರೀದೇವಿ ಶಿರಸಂಗಿ, ಗುರುನಾಥ ಬೀರನಗಡ್ಡಿ, ರೇಣುಕಾ ನಾಯ್ಕರ, ಗೀತಾ ಮಾಂಗ, ಪವಿತ್ರಾ ಕೋಳಿ, ನೀತಾ ಮಾನೆ, ಜ್ಯೋತಿ ಪಾಟೀಲ ಇತರರು ಇದ್ದರು.

    ವಿಮೆ ಸೌಲಭ್ಯ ಒದಗಿಸಿ: ಕರೊನಾ ಸಂಕಷ್ಟ ಕಾಲದಲ್ಲಿ ಹಗಲಿರುಳು ದುಡಿದ ನಮಗೆ ಸರ್ಕಾರ 50 ಲಕ್ಷ ರೂ. ವಿಮೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

    ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 30 ಸಾವಿರ ರೂ., ಸಹಾಯಕಿಯರಿಗೆ 25 ಸಾವಿರ ರೂ. ವೇತನ ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಮೇಲ್ವಿಚಾರಕಿಯರ ಹುದ್ದೆಗಳ ಭರ್ತಿಗಾಗಿ ಕಾರ್ಯಕರ್ತೆಯರನ್ನೇ ಪರಿಗಣಿಸಬೇಕು. ಸಹಾಯಕಿಯರಿಗೆ ಸೇವಾ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು. ಮಂದಾ ನೇವಗಿ, ಮೀನಾಕ್ಷಿ ದಪಡೆ, ಸುಷ್ಮಾ ರಜಪೂತ, ಕೃಷ್ಣಾ ತೋಪಿನಕಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts