More

    ಪ್ರಚಾರಕ್ಕೆ ಮಕ್ಕಳನ್ನು ಬಳಸುವಂತಿಲ್ಲ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಎಚ್ಚರಿಕೆ

    ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಕ್ಕಳನ್ನು ಪ್ರಚಾರದ ಕೆಲಸಕ್ಕೆ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
    ರಾಜಕೀಯ ಪಕ್ಷದವರು ಮತಯಾಚನೆ ಮಾಡುವ ವೇಳೆ ಮಕ್ಕಳನ್ನು ಬಳಕೆ ಮಾಡಿಕೊಂಡರೆ ಕಾನೂನು ಉಲ್ಲಂಘನೆಯಾದಂತಾಗುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ರಾಜಕೀಯ ಮುಖಂಡರ ಸಭೆಯಲ್ಲಿಯೂ ಸೂಚನೆ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮಾ.29ರಿಂದ ಏ.10ರವರೆಗೆ 37,71,600 ರೂ ನಗದು, 49,68,02 ರೂ ಮೌಲ್ಯದ 19,190 ಲೀ ಮದ್ಯ, 5,500 ರೂ ಮೌಲ್ಯದ ಡ್ರಗ್ಸ್, 25,08,170 ರೂ ಮೌಲ್ಯದ 22,009 ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲದರ ಒಟ್ಟು ಮೌಲ್ಯ 1,12,53,392 ರೂ. ಗಳಾಗಿವೆ. ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
    ಜಿಲ್ಲೆಯಲ್ಲಿ ಸ್ಥಾಪಿಸಿರುವ ಎಲ್ಲ ಚೆಕ್‌ಪೋಸ್ಟ್‌ಗಳಿಗೆ ವೆಬ್‌ಕಾಸ್ಟಿಂಗ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರಿಶೀಲನೆ ಮಾಡುತ್ತಿರುವ ದೃಶ್ಯ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಕೇಂದ್ರದಲ್ಲಿ ಕಣ್ಗಾವಲು ತಂಡ ವೀಕ್ಷಣೆ ನಡೆಯಲಿದೆ. ಅಗತ್ಯವಿರುವ ಕಡೆ ಸಿಎಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. ಏಳು ಜನ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ 667 ಆಯುಧಗಳನ್ನು ಠಾಣಾ ಸುರ್ಪದಿಗೆ ಪಡೆಯಲಾಗಿದೆ. ಆದರೆ ಕೆಲವರಿಗೆ ಅನಿವಾರ್ಯವಿರುವ ಬಗ್ಗೆ ಚರ್ಚೆ ಮಾಡಿ ಇತ್ಯರ್ಥಗೊಳಿಸಲಾಗುವುದು ಎಂದು ವಿವರಿಸಿದರು.
    ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,414 ಹಾಗೂ 23,100 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಮನೆಯಿಂದಲೇ ಮತದಾನ ಮಾಡಲು ಅನುಕೂಲವಾಗುವಂತೆ ನಮೂನೆ 12ಡಿ ವಿತರಣೆ ಮಾಡಲಾಗುತ್ತಿದ್ದು, ಈವರೆಗೆ 60524 ಜನರಿಗೆ ನೀಡಲಾಗಿದೆ. ಆದರೆ ಬಹುತೇಕರು ಮತಗಟ್ಟೆಗೆ ಬಂದು ಮತದಾನ ಮಾಡಲು ಉತ್ಸಾಹ ತೋರುತ್ತಿರುವುದು ಉತ್ತಮ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಅವರೆಲ್ಲ ಮತದಾನ ಮಾಡಲು ಅನುಕೂಲವಾಗುವಂತೆ ಸೌಲಭ್ಯ ಒದಗಿಸಲಾಗುವುದು. ಜಿಲ್ಲೆಯಲ್ಲಿ 1798 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೂ ಒರ್ವ ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತದಾನದ ಅಧಿಕಾರಿ ಸೇರಿದಂತೆ ಒಟ್ಟು 8648 ಸಿಬ್ಬಂದಿಗೆ ವಿಧಾನಸಭಾ ಕ್ಷೇತ್ರವಾರು ನೇಮಕಾತಿ ಮಾಡಲಾಗಿದೆ. ಜತೆಗೆ ಏ.18ರಂದು ಮೊದಲ ಹಂತದಲ್ಲಿ ಎಲ್ಲರಿಗೂ ತರಬೇತಿ ನೀಡಲಾಗುತ್ತಿದೆ ಎಂದರು.
    ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಲು ಚುನಾವಣಾ ಕರ್ತವ್ಯ ನಿರ್ವಹಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಚುನಾವಣಾ ತಂಡಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸಲಾಗಿದೆ. ದಿನದ 24 ಗಂಟೆಯೂ ಜಿಪಿಎಸ್ ನಕ್ಷೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 14 ಪಿಂಕ್ ಮತಗಟ್ಟೆ, ಅಂಗವಿಕಲ ಸಿಬ್ಬಂದಿಯೇ ನಿರ್ವಹಿಸಲು 7 ಮತಗಟ್ಟೆ, 35 ಜಾನಪದ ಮತಗಟ್ಟೆ ಹಾಗೂ 30 ವರ್ಷದೊಳಗಿನ ಅಧಿಕಾರಿಗಳೇ ನಿರ್ವಹಿಸುವ 14 ಮತಗಟ್ಟೆಯನ್ನು ಗುರುತಿಸಲಾಗಿದೆ ಎಂದು ಹೇಳಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಉಪಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts