More

    ಅವ್ವೇರಹಳ್ಳಿ ಸರ್ವತೋಮುಖ ಅಭಿವೃದ್ದಿಗೆ ಜಿಲ್ಲಾಡಳಿತ ಬದ್ಧ : ಜಿಲ್ಲಾಧಿಕಾರಿ ಅರ್ಚನಾ ಹೇಳಿಕೆ

    ಮಾಗಡಿ :  ಅವ್ವೇರಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಎಂಎಸ್. ಅರ್ಚನಾ ತಿಳಿಸಿದರು.
    ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುಗ್ರಾಮ ಅವ್ವೇರಹಳ್ಳಿಯನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದ್ದು, ಅಧಿಕಾರಿಗಳ ಜತೆ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ.

    ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮನವಿ ಸ್ವೀಕರಿಸಿ ಸಾಧ್ಯವಾದಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇಂದು 65 ಅಹವಾಲುಗಳು ಬಂದಿದ್ದು ಶೀಘ್ರ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

    ಪ್ರಮುಖವಾಗಿ ಗ್ರಾಮ ಸಂಪರ್ಕಿಸುವ ರಸ್ತೆ ಹದಗೆಟ್ಟಿರುವ ಬಗ್ಗೆ ಹೆಚ್ಚು ದೂರುಗಳು ಬಂದಿದ್ದು, ಸಂಬಂಧಪಟ್ಟವರೊಂದಗೆ ಚರ್ಚಿಸಿದ್ದು, ರಸ್ತೆ ಅಭಿವೃದ್ದಿಗೆ ಹಣ ಮಂಜೂರಾಗಿದ್ದು, ಬಿಡುಗಡೆಯಾಗದ ಕಾರಣ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ತಿಳಿದುಬಂದಿದೆ. ಕಾವೇರಿ ನೀರಾವರಿ ನಿಗಮದ ಎಂಡಿ ಅವರ ಜತೆ ಚರ್ಚಿಇಸ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದರು.
    ಗ್ರಾಮಕ್ಕೆ ಅಗತ್ಯವಾಗಿರುವ ಸ್ಮಶಾನ ನಿರ್ಮಾಣಕ್ಕೆ ಸರ್ವೇ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಬರಲಿದೆ. ಜಮೀನು ಮಂಜೂರು ಮಾಡಲಾಗುವುದು. ಆಶ್ರಯ ಮನೆ ನಿರ್ಮಾಣಕ್ಕೆ ಜಾಗಕ್ಕಾಗಿ ಇಒ ಪ್ರದೀಪ್ ಮನವಿ ಮಾಡಿದ್ದು, ಜಮೀನು ಗುರುತಿಸಿ, ಸ್ಕೆಚ್ ಮಾಡಿದ ನಂತರ ಸರ್ಕಾರಕ್ಕೆ ಕಳಿಸಿ ಆಶ್ರಯ ಯೋಜನೆಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಚನಾ ತಿಳಿಸಿದರು.
    ಸಾಗುವಳಿ ಚೀಟಿ ಹಂಚಿಕೆ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಶಾಸಕರು ಮುಂದಿನವಾರ ಸಭೆ ನಿಗದಿ ಪಡಿಸಿದ್ದು ಉಳಿದ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದರು.
    ವಡಹಳ್ಳಿ ಗೇಟ್‌ನಿಂದ ಅವ್ವೇರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 4 ಕಿ.ಮೀ. ರಸ್ತೆ ಅಭಿವೃದ್ದಿಗೆ ಕ್ರಮ ಕೈಗೊಂಡಿಲ್ಲ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ತೆರಳಲು ಕಷ್ಟವಾಗಿದೆ. ತುರ್ತಾಗಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮೀನುಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಂಚನಬೆಲೆ ಲೋಕೇಶ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

    ಗ್ರಾಮದ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಮಾಡಲಾಯಿತು ಈ ವೇಳೆ 6 ಮಂದಿಗೆ ಕ್ಯಾನ್ಸರ್ ಗೆಡ್ಡೆಗಳು ಇರುವ ಬಗ್ಗೆ ಕಂಡು ಬಂದಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ತಾ.ಆರೋಗ್ಯಾಧಿಕಾರಿ ಡಾ.ಸತೀಶ್ ಸೂಚಿಸಿದರು.

    ಗ್ರಾಮದ ಅವ್ವೇರಹಳ್ಳಿ ಪುನರ್ವಸತಿ ಕಾಲನಿ ಮೀನುಗಾರರ ಸಹಕಾರ ಸಂಘದ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.ವಾಸ್ಥವ್ಯ ಹೂಡಲು ಹೊಸ ಹಾಸಿಗೆ, ಮಂಚವನ್ನು ಅಳವಡಿಸಲಾಗಿದೆ.

    ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್, ತಾಪಂ ಇಒ ಟಿ.ಪ್ರದೀಪ್, ಡಿಡಿಎಲ್‌ಆರ್ ಸಂತೋಷ್, ಎಡಿಎಲ್‌ಆರ್ ಪರಮೇಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯನಾಯ್ಕ, ಗ್ರಾಪಂ ಅಧ್ಯಕ್ಷ ಡಿ.ಸಿ. ನರಸಿಂಹಯ್ಯ, ಗ್ರಾಮದ ಬೋಗಯ್ಯ,ರಾಜಣ್ಣ, ನಾರಾಯಣ್, ಹನುಮಂತರಾಜು, ಕಾಳಿ ಮುತ್ತಯ್ಯ, ಗೋವಿಂದಯ್ಯ, ವಿ. ನಂಜುಂಡಯ್ಯ, ಸಿಡಿಪಿಓ ಸುರೇಂದ್ರ, ಉಪತಹಶೀಲ್ದಾರ್ ಜಗದೀಶ್, ರವಿಕುಮಾರ್, ಆರ್‌ಐಗಳಾದ ವೆಂಕಟೇಶ್, ರೆಹಮತ್, ವಿರೇಶ್, ನಾರಾಯಣ್, ಅಕ್ಷಿತ, ರವಿಕುಮಾರ್, ಲೋಕೇಶ್, ಹೇಮಲತಾ ಇತರರು ಇದ್ದರು.

    ಆರೋಗ್ಯ ತಪಾಸಣೆ ಮಾಡಿಸಿಕೊಂಡ ಡಿಸಿ : ಅವ್ವೇರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಅರ್ಚನಾ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜಿಲ್ಲಾಧಿಕಾರಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೋಳಿಗೆ ಊಟ, ಹಿತಿಕಿದ ಅವರೆಬೇಳೆ ಸಾರು, ರಾಗಿ ಮುದ್ದೆ ಊಟ ನೀಡಲಾಯಿತು.

    ಬೆಸ್ಕಾಂ ವಿರುದ್ಧ ದೂರು : ಗ್ರಾಮಕ್ಕೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಗಾಳಿ, ಮಳೆ ಬಂದರೆ 2 ದಿನ ವಿದ್ಯುತ್ ಪೂರೈಕೆ ಇರುವುದಿಲ್ಲ. ಬೆಟ್ಟ ಗುಡ್ಡಿಗಳ ನಡುವೆ ಗ್ರಾಮವಿದ್ದು, ಕಾಡುಪ್ರಾಣಿಗಳ ಹಾವಳಿಯೂ ಇದೆ. ಹಾಗಾಗಿ ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

    ಗ್ರಾಮದ 32 ಕುಟುಂಬಗಳಿದ್ದು ಮನೆಗಳಿಗೆ ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಆದರೆ ಮೀಟರ್ ಅಳವಡಿಸಿಲ್ಲ. ಇದರಿಂದ ನಿರಂತರ ಜ್ಯೋತಿ ಕಲ್ಪಿಸಲು ಅಡಚಣೆಯಾಗುತ್ತಿರುವ ಬಗ್ಗೆ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು, ಒಂದು ದಿನ ನಿಗದಿ ಪಡಿಸಿ ಮೀಟರ್ ಅಳವಡಿಸಲು ಬೇಕಿರುವ ದಾಖಲೆಗಳನ್ನು ಪಡೆದುಕೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಬಸ್ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts