More

    ರನ್ ಲೆಕ್ಕ ತಪ್ಪಿ ಶತಕವಂಚಿತರಾದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್!

    ಕೇಪ್‌ಟೌನ್: ಕ್ರಿಕೆಟ್ ಎಂದರೆ ಬರೀ ಬ್ಯಾಟು-ಚೆಂಡು ಮತ್ತು ಕೌಶಲದ ಆಟವಲ್ಲ. ಇಲ್ಲಿ ಸಾಕಷ್ಟು ಲೆಕ್ಕಾಚಾರಗಳೂ ಇರುತ್ತವೆ. ಕ್ರಿಕೆಟ್ ಒಂದು ರೀತಿಯಲ್ಲಿ ಗಣಿತವೂ ಆಗಿದೆ. ಹೀಗಾಗಿ ಬ್ಯಾಟಿಂಗ್‌ನಲ್ಲಿ ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಎನಿಸಿದ್ದರೂ, ಗಣಿತದ ವಿಷಯದಲ್ಲಿ ಅಷ್ಟೇನೂ ಪರಿಣತರಲ್ಲದ ಕಾರಣದಿಂದಾಗಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ! 99 ರನ್‌ನೊಂದಿಗೆ ಅಜೇಯರಾಗಿ ಉಳಿಯುವ ಮೂಲಕ ಅವರು ನಿರಾಸೆ ಅನುಭವಿಸಿದರು.

    ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಉಭಯ ತಂಡಗಳ ಸ್ಕೋರ್ (191) ಸಮನಾದಾಗ ಡೇವಿಡ್ ಮಲಾನ್ 98 ರನ್‌ನಲ್ಲಿದ್ದರು. ಈ ವೇಳೆ ಅವರು ಬೌಂಡರಿ ಸಿಡಿಸಿದ್ದರೆ ಶತಕ ಪೂರೈಸಬಹುದಿತ್ತು. ಸಾಕಷ್ಟು ಎಸೆತಗಳೂ ಬಾಕಿ ಉಳಿದಿದ್ದವು. ಆದರೆ ಶತಕಕ್ಕೆ ಒಂದೇ ರನ್ ಸಾಕೆಂದು ಸಿಂಗಲ್ಸ್ ಕಸಿದ ಮಲಾನ್ ಟಿ20 ಕ್ರಿಕೆಟ್‌ನಲ್ಲಿ ತನ್ನ 2ನೇ ಸೆಂಚುರಿ ಪೂರೈಸುವ ಅವಕಾಶದಿಂದ ಕೇವಲ 1 ರನ್‌ನಿಂದ ವಂಚಿತರಾದರು.

    ‘88 ರನ್‌ನಲ್ಲಿದ್ದಾಗ ನಾನು 2 ಸಿಕ್ಸರ್ ಬಾರಿಸಿದರೆ ಶತಕ ಪೂರೈಸಬಹುದೆಂದು ಗೊತ್ತಿತ್ತು. ಬಳಿಕ ನಾನು 1 ಸಿಕ್ಸರ್, 1 ಬೌಂಡರಿ ಬಾರಿಸಿದೆ. ಇದರಿಂದ ಲೆಕ್ಕದಲ್ಲಿ ತಪ್ಪಾಯ್ತು. ನಾನು ಮತ್ತೆ ಗಣಿತದ ತರಗತಿಗೆ ತೆರಳಬೇಕಾಗಿದೆ’ ಎಂದು ಮಲಾನ್ ಪಂದ್ಯದ ಬಳಿಕ ಹೇಳಿದರು.

    ಮಲಾನ್ ಟಿ20 ಕ್ರಿಕೆಟ್‌ನಲ್ಲಿ 99 ರನ್‌ಗೆ ಅಜೇಯರಾಗಿ ಉಳಿದ 3ನೇ ಬ್ಯಾಟ್ಸ್‌ಮನ್. ಅಲೆಕ್ಸ್ ಹ್ಯಾಲ್ಸ್ (2012) ಮತ್ತು ಲ್ಯೂಕ್ ರೈಟ್ (2012) ಮೊದಲಿಬ್ಬರು. ಈ ಮೂವರೂ ಇಂಗ್ಲೆಂಡ್‌ನವರು ಎಂಬುದು ಗಮನಾರ್ಹ. ಸರಣಿಯಲ್ಲಿ ಒಟ್ಟು 173 ರನ್ ಬಾರಿಸಿದ ಮಲಾನ್ ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.

    ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಇಂಗ್ಲೆಂಡ್, ಟಿ20 ರ‌್ಯಾಂಕಿಂಗ್‌ನಲ್ಲಿ ಟಾಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts