More

    ಬಾಲ್ಯವಿವಾಹ ಪ್ರಕರಣಗಳ ಕಡಿವಾಣ ಅಗತ್ಯ

    ದಾವಣಗೆರೆ: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಡಿವಾಣ ಹಾಕುವ ಅಗತ್ಯವಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

    ನಗರದ ವನಿತಾ ಸಮಾಜದ ಶ್ರೀ ಸತ್ಯ ಸಾಯಿ ರಂಗಮಂದಿರದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವನಿತಾ ಸಮಾಜದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಬಾಲ್ಯವಿವಾಹ ಪ್ರಕರಣಗಳಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಹೊನ್ನಾಳಿ ತಾಲೂಕಿನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ಆಗುತ್ತಿರುವುದು ಕಂಡುಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಬಾಲ್ಯವಿವಾಹ ಪದ್ಧತಿ ಸಾಮಾಜಿಕ ಪಿಡುಗಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಮದುವೆ ಆಗುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮಕ್ಕಳು ಅಪೌಷ್ಟಿಕತೆಯಿಂದ ನರಳಬೇಕಾಗುತ್ತದೆ. ಅವರ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.

    ಪುರಾಣ ಕಾಲದಿಂದಲೂ ಮಹಿಳೆ ದೌರ್ಜನ್ಯಕ್ಕೆ ಒಳಗಾಗಿದ್ದಳು. ಆದರೆ, ಅಂದಿನ ಕಾಲದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಜೀವನ ಮುನ್ನಡೆಸಿಕೊಂಡು ಬರುತ್ತಿದ್ದಳು. ಶಿಕ್ಷಣದಿಂದ ವಂಚಿತಳಾಗಿದ್ದಳು. ಆದರೀಗ ಮಹಿಳೆ ಶಿಕ್ಷಣ ಪಡೆಯುವ ಮೂಲಕ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಿ ಪುರುಷರಷ್ಟೇ ಸರಿ ಸಮಾನವಾಗಿ ಬೆಳೆದಿದ್ದಾಳೆ ಎಂದರು.

    ‘ವನಿತಾ ಸೇವಾ ಪ್ರಶಸ್ತಿ’ ಸ್ವೀಕರಿಸಿದ ಸಮಾಜ ಸೇವಕಿ ಡಾ. ಶಾಂತಾಭಟ್ ಮಾತನಾಡಿ, ಈ ಪ್ರಶಸ್ತಿ ‘ಕಸ-ರಸ’ ಅಭಿಯಾನದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಲ್ಲುತ್ತದೆ. ಜನರ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಾಗಿದೆ. ಸ್ವಚ್ಛ, ಸುಂದರ, ಸಮೃದ್ಧ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ಹೇಳಿದರು.

    ಜನರ ಮನಸ್ಸಿನಲ್ಲಿ ಪರಿಸರ ಸ್ವಚ್ಛತೆಯ ಅರಿವಿನ ಬೀಜ ಬಿತ್ತಿದ್ದೇವೆ. ಅದನ್ನು ಪೋಷಿಸುವ ಕೆಲಸವಾಗಬೇಕಷ್ಟೇ ಎಂದರು.

    ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಷ್ಮಾ ಮೋಹನ್, ರೇಖಾ ಶಾಮನೂರು ಗಣೇಶ್ ಇದ್ದರು.

    ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ಬಾಲಕಿಯರು ಭರತ ನಾಟ್ಯ ಪ್ರದರ್ಶಿಸಿದರು. ಅನುರಾಧ ರಮೇಶ್, ಸೂರ್ಯಪ್ರಭ ಪ್ರಾರ್ಥಿಸಿದರು. ಉಷಾ ರಂಗನಾಥ್ ಸ್ವಾಗತಿಸಿದರು. ಗೀತಾ ಬದರಿನಾಥ್ ನಿರೂಪಿಸಿದರು. ಸುನೀತ ಇಂದೂಧರ್, ನಳಿನಿ ಅಚ್ಯುತ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ನಾಗರತ್ನ ಜಗದೀಶ್, ಮಂಜುಳಾ ಬಸವಲಿಂಗಪ್ಪ, ಕಲಾ ಭೀಮಾನಂದ್, ಪ್ರೇಮಾ ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts