More

    ಸ್ಮಾರ್ಟ್ ರಸ್ತೆಗಳ ಅವತಾರ ನೋಡಿರಣ್ಣ..!

    ರಮೇಶ ಜಹಗೀರದಾರ್ ದಾವಣಗೆರೆ: ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ನಗರದ ರಸ್ತೆಗಳ ಬಣ್ಣ ಬಯಲಾಗಿದೆ. ಯಾವ ಭಾಗಕ್ಕೆ ಹೋದರೂ ಗುಂಡಿಗಳ ಅವತಾರ ಎದ್ದು ಕಾಣುತ್ತಿವೆ. ಪರವಾಗಿಲ್ಲ ಎನ್ನುವಂತಿದ್ದ ರೋಡುಗಳೂ ಅದ್ವಾನವಾಗಿವೆ. ಹೆಜ್ಜೆ ಹೆಜ್ಜೆಗೂ ತಗ್ಗುಗಳ ದರ್ಶನವಾಗುತ್ತಿದೆ. ಪಾದಚಾರಿಗಳು, ವಾಹನ ಸವಾರರು ಸಂಚರಿಸುವುದೇ ಕಷ್ಟವಾಗಿದೆ.

    ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಹದಡಿ ರಸ್ತೆಯೇ ಉದಾಹರಣೆ ಸಾಕು. ಬೈಪಾಸ್‌ನಿಂದ ಗಾಂಧಿ ಸರ್ಕಲ್‌ವರೆಗೆ ಬಂದರೆ ರಸ್ತೆಗಳ ಗತಿ ಏನಾಗಿದೆ ಎನ್ನುವ ಅಂದಾಜು ಸಿಗುತ್ತದೆ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪ ಪಕ್ಕದಲ್ಲಿ ಹಾದು ಹೋದರೆ ಬಾಯ್ದೆರೆದ ಗುಂಡಿಗಳು ಅಪಾಯವನ್ನು ಆಹ್ವಾನಿಸುವಂತಿವೆ.

    ಒಂದೊಂದು ವೃತ್ತಗಳೂ ಗುಂಡಿಗಳ ಕತೆ ಹೇಳುತ್ತವೆ. ವಾಹನ ಸವಾರರು ಆರ್.ಎಚ್. ಛತ್ರದ ಬಳಿ ಇರುವ ವೃತ್ತವನ್ನು ದಾಟಬೇಕೆಂದರೆ ಬೇಸರಪಡುವಂತಿವೆ. ಹಳ್ಳ ಕೊಳ್ಳಗಳಂತೆ ಕಾಣಿಸುವ ಗುಂಡಿಗಳು ಅಪಾಯವನ್ನು ಆಹ್ವಾನಿಸುವಂತಿವೆ. ಮೊದಲೇ ಆ ಟ್ರಾಫಿಕ್‌ನಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತವೆ. ಸಂಚಾರ ನಿಯಮವನ್ನು ಎಷ್ಟು ಮಂದಿ ಪಾಲಿಸುತ್ತಾರೋ, ಯಾರು ಸಿಗ್ನಲ್ ದೀಪದ ಕಡೆಗೆ ನೋಡುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಅಲ್ಲಿಂದ ಮುಂದೆ ಸಾಗುವ ಧಾವಂತ ಕಾಣಿಸುತ್ತದೆ.

    ವಿದ್ಯಾರ್ಥಿ ಭವನದ ಬಳಿಯಂತೂ ಗುಂಡಿಗಳದೇ ಸಾಮ್ರಾಜ್ಯ. ಸಿಗ್ನಲ್‌ನ ಎರಡೂ ಬದಿಯಲ್ಲೂ ತಗ್ಗುಗಳು ಎದುರಾಗುತ್ತವೆ. ಅಂಬೇಡ್ಕರ್ ಸರ್ಕಲ್‌ನಲ್ಲೂ ರಸ್ತೆ ಹಾಳಾಗಿದೆ. ಜಯದೇವ ವೃತ್ತವೂ ಇದಕ್ಕೆ ಹೊರತಾಗಿಲ್ಲ. ಗಾಂಧಿ ವೃತ್ತದಲ್ಲೂ ಅದರ ಅನುಭವವಾಗುತ್ತದೆ. ಕೆಲವು ಕಡೆ ರಸ್ತೆಯ ಮಧ್ಯದಲ್ಲೇ ತಗ್ಗು, ಗುಂಡಿಗಳಿವೆ. ಇನ್ನೂ ಕೆಲವೆಡೆ ರಸ್ತೆಯ ಅಂಚಿನಲ್ಲಿ ಕಾಣಸಿಗುತ್ತವೆ.

    ಸ್ಮಾರ್ಟ್ ರಸ್ತೆಗಳ ಅವತಾರ ನೋಡಿರಣ್ಣ..!

    ಇನ್ನು ಹಳೆಯ ದಾವಣಗೆರೆ ಕತೆ ಹೇಳುವುದೇ ಬೇಡ. ಮೊದಲೇ ಸಣ್ಣದಾದ ರಸ್ತೆಗಳು, ಸಂಚಾರ ದಟ್ಟಣೆ. ಮಳೆ ಅಲ್ಲಿಯೂ ತನ್ನ ಆಟವನ್ನು ತೋರಿದೆ. ಹೊಂಡದ ಸರ್ಕಲ್‌ಗೆ ಹೋಗುವ ರಸ್ತೆ, ಶಿವಾಲಿ ಟಾಕೀಸ್ ರಸ್ತೆ ಹೀಗೆ ಒಂದೊಂದನ್ನೇ ಉದಾಹರಿಸಬಹುದು.

    ಒಟ್ಟಿನಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಸಂಚಾರ ಮಾಡುವುದೇ ದುಸ್ತರ ಎನ್ನುವಂತಾಗಿದೆ. ಧುತ್ತೆಂದು ಎದುರಾಗುವ ಗುಂಡಿಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವರಂತೂ ವೇಗವಾಗಿ ವಾಹನ ಓಡಿಸುವುದರಿಂದ ಅಪಾಯ ಹೆಚ್ಚು. ಪ್ರಯಾಸದ ಸವಾರಿ ಮುಗಿಸುವ ಹೊತ್ತಿಗೆ ಮೈ ಕೈ ನೋವು ಬಂದಿರುತ್ತದೆ.

    ವಾಹನ ಸವಾರರದು ಒಂದು ರೀತಿಯ ಸಮಸ್ಯೆಯಾದರೆ ಪಾದಚಾರಿಗಳದು ಇನ್ನೊಂದು ಬಗೆ. ಮಳೆ ನೀರು ತುಂಬಿದ ಗುಂಡಿಗಳ ಪಕ್ಕದಲ್ಲಿ ನಡೆದುಕೊಂಡು ಹೊರಟರೆ ಬಟ್ಟೆಗಳು ಕೊಳೆಯಾಗುವುದು ಗ್ಯಾರಂಟಿ. ವಾಹನಗಳು ಹಾದು ಹೋದಾಗ ರಸ್ತೆಯ ನೀರು ಮೈ ಮೇಲೆ ಬೀಳುತ್ತವೆ. ಕೆಲವು ಕಡೆ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು ಪೈಪ್‌ಲೈನ್ ಬದಲಿಸುವ ಕೆಲಸ ನಡೆದಿದೆ. ಅಲ್ಲಿ ಸಂಚರಿಸುವುದೂ ದುಸ್ತರ.

    ನಗರದ ರಸ್ತೆಗಳಲ್ಲಿ ಗುಂಡಿಗಳು ಬಹಳ ಆಗಿವೆ. ಮಳೆಗಾಲ ಆಗಿರುವುದರಿಂದ ನೀರು ತುಂಬಿಕೊಳ್ಳುತ್ತವೆ. ಸದ್ಯಕ್ಕೆ ಮಣ್ಣು ಹಾಕಿ ಭರ್ತಿ ಮಾಡಲಿ. ನಂತರ ಟಾರ್, ಜೆಲ್ಲಿ ಹಾಕಿ ಸರಿಪಡಿಸಲಿ. ಗುಂಡಿಗಳಿರುವುದರಿಂದ ವಾಹನ ಓಡಿಸುವಾಗ ಬ್ಯಾಲೆನ್ಸ್ ಸಿಗುವುದಿಲ್ಲ. ಅಪಘಾತಗಳಾಗುವ ಸಾಧ್ಯತೆ ಇರುತ್ತದೆ. ಬೈಕ್, ಬಸ್, ಕಾರು ಯಾವುದೇ ಗಾಡಿಯಾದರೂ ಸಂಚರಿಸಲು ಸಮಸ್ಯೆಯಾಗುತ್ತದೆ. ಸಂಬಂಧಪಟ್ಟವರು ಇದನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಲಿ.
    l ಮಲ್ಲೇಶ್, ಆಟೋ ಚಾಲಕ

    ನಗರದಲ್ಲಿರುವ ರಾಜ್ಯ ಹೆದ್ದಾರಿಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ. ಇನ್ನುಳಿದ ಒಳ ರಸ್ತೆಗಳನ್ನು ದುರಸ್ತಿಪಡಿಸಲು ನಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಮಳೆ ನಿಂತರೆ ಕೆಲಸ ಕೈಗೊಳ್ಳಲು ಅನುಕೂಲವಾಗುತ್ತದೆ.
    l ರೇಣುಕಾ, ಮಹಾನಗರ ಪಾಲಿಕೆ ಆಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts