More

    ಬನ್ನಿ ತಗೊಂಡು ಬಂಗಾರದಂಗ ಇರೋಣ

    ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ನಗರ ದೇವತೆ, ಗ್ರಾಮ ದೇವತೆ ಸೇರಿ ವಿವಿಧ ಶಕ್ತಿ ದೇಗುಲಗಳಲ್ಲಿ ನವ ದುರ್ಗೆಯರ ರೂಪದಲ್ಲಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಆರಾಧಿಸಲಾಯಿತು.

    ದಾವಣಗೆರೆಯ ದುಗ್ಗಮ್ಮ ದೇವಸ್ಥಾನ, ನಿಟ್ಟುವಳ್ಳಿ ದುರ್ಗಾಂಬಿಕಾ ದೇವಿ, ಕನ್ನಿಕಾ ಪರಮೇಶ್ವರಿ, ದಾವಲ್‌ಪೇಟೆ ಚೌಡೇಶ್ವರಿ, ಶಾರದಾಂಬಾ, ನಿಮಿಷಾಂಬಾ, ಶಿವ-ಪಾರ್ವತಿ, ಕಾಳಿಕಾ ದೇವಿ, ಬನಶಂಕರಿ ದೇಗುಲ ಮಾತ್ರವಲ್ಲದೆ ಜಿಲ್ಲೆಯ ಇತರೆಡೆಯೂ ಎಲ್ಲ ದೇವಿ ಗುಡಿಗಳಲ್ಲಿ ದಸರಾ ಶರನ್ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರ ನೆರವೇರಿತು.

    ನವರಾತ್ರಿ ಉತ್ಸವದ ಕಡೆಯ ಎರಡು ದಿನ ಅಂದರೆ ಮಂಗಳವಾರ ಆಯುಧ ಪೂಜೆ ಹಾಗೂ ಬುಧವಾರ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ಸಂಜೆ ಎಲ್ಲೆಡೆ ದೇವಿ ಉತ್ಸವ ಜರುಗಿಸಿ ಪದ್ಧತಿಯಂತೆ ಬನ್ನಿ ವೃಕ್ಷಕ್ಕೆ ಪೂಜಿಸಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿತು. ದೇವರ ಪಲ್ಲಕ್ಕಿ ಉತ್ಸವ ವೇಳೆ ಮಹಿಳೆಯರು ಆರತಿ ಬೆಳಗಿ ನಮಿಸಿದರು. ಹಣ್ಣು-ಕಾಯಿ ಅರ್ಪಿಸಿ ಭಕ್ತಿ ಮೆರೆದರು.

    ಹಿರಿ-ಕಿರಿಯರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ‘ಬನ್ನಿ ತಗೊಂಡು ಬಂಗಾರದಂಗ ಇರೋಣ..’ ಎಂದು ಹರಸುತ್ತ, ಆಶಿಸುತ್ತ ದಸರಾ ಮಹೋತ್ಸವಕ್ಕೆ ತೆರೆ ಎಳೆದರು. ಉತ್ಸವದೊಂದಿಗೆ ಬನ್ನಿ ಮುಡಿದು ಮನೆಗೆ ಬಂದ ಪುರುಷರು ಹಾಗೂ ಮಕ್ಕಳಿಗೆ ಮಹಿಳೆಯರು ವಿಜಯದ ಪ್ರತೀಕವಾಗಿ ಆರತಿ ಮಾಡಿ ಸ್ವಾಗತಿಸಿದರು.

    ಆಕರ್ಷಕ ಶೋಭಾಯಾತ್ರೆ, ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಮೆರುಗು: ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ನಗರದಲ್ಲಿ ಬುಧವಾರ ಆಕರ್ಷಕ ಶೋಭಾಯಾತ್ರೆ ನಡೆಯಿತು. ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಬಳಿ ಆರಂಭವಾದ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಹಾದು ಹೋಗಿ ಪಿಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಅಂತ್ಯಗೊಂಡಿತು.

    ಕೇಸರಿ ಧ್ವಜಗಳು ಶೋಭಾಯಾತ್ರೆಗೆ ರಂಗು ತುಂಬಿದವು. ಕೀಲುಕುದುರೆ, ನಂದಿಕೋಲು, ವೀರಗಾಸೆ, ಡೊಳ್ಳು ಕುಣಿತ ಮುಂತಾದ ಕಲಾ ತಂಡಗಳು ಮೆರವಣಿಗೆಯ ಅಂದವನ್ನು ಹೆಚ್ಚಿಸಿದವು. ದೊಡ್ಡ ದೊಡ್ಡ ಗೊಂಬೆಗಳು ಕಳೆಗಟ್ಟುವಂತೆ ಮಾಡಿದವು.

    ದೇವಿ ವಿಗ್ರಹ ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ಭಕ್ತರು ಹಣ್ಣು, ಕಾಯಿ ನೀಡಿ ಭಕ್ತಿ ಸಮರ್ಪಿಸಿದರು. ಮುಂದಿನ ವಾಹನಗಳಲ್ಲಿ ಭಾರತಾಂಬೆ, ವೀರ ಸಾವರ್ಕರ್, ಸಂತರು, ಶರಣರು, ರಾಜ ಮಹಾರಾಜರ ಭಾವಚಿತ್ರಗಳಿರುವ ಸ್ತಬ್ಧಚಿತ್ರಗಳು ಗಮನ ಸೆಳೆದವು.

    ಎರಡು ಡಿಜೆಗಳಲ್ಲಿ ಮೂಡಿಬಂದ ಗೀತೆಗಳಿಗೆ ಯುವಕರು, ಮಕ್ಕಳು ಹೆಜ್ಜೆ ಹಾಕಿದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮೊಳಗಿದವು. ಶೋಭಾಯಾತ್ರೆ ಸಾಗುತ್ತಿದ್ದ ರಸ್ತೆಗಳ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಸಾರ್ವಜನಿಕರು ಶೋಭಾಯಾತ್ರೆ ಅಂದವನ್ನು ಕಣ್ತುಂಬಿಕೊಂಡರು. ಕೆಲವರು ಸೆಲ್ಫಿ ಪಡೆದುಕೊಂಡರು.

    ಶೋಭಾಯಾತ್ರೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ ನೀಡಿದರು. ಜಡೆಸಿದ್ದೇಶ್ವರ ಮಠ, ಪುಣ್ಯಕೋಟಿ ಮಠದ ಶ್ರೀಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮೇಯರ್ ಆರ್.ಜಯಮ್ಮ, ಮಾಜಿ ಮೇಯರ್‌ಗಳಾದ ಬಿ.ಜಿ.ಅಜಯಕುಮಾರ್, ಎಸ್.ಟಿ.ವೀರೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ಮುಖಂಡರಾದ ಸತೀಶ ಪೂಜಾರಿ, ವೈ.ಮಲ್ಲೇಶ್, ಎನ್.ರಾಜಶೇಖರ್, ಶಿವನಗೌಡ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts