More

    ಹರನಹಳ್ಳಿ ಕೆಂಗಾಪುರದಲ್ಲಿ ನುಡಿ ಜಾತ್ರೆಗೆ ತೆರೆ ಕನ್ನಡದ ಮನಸ್ಸುಗಳಿಗೆ ಮುದ ನೀಡಿದ ಹಬ್ಬ

    ಚನ್ನಗಿರಿ: ಅಡಕೆ ನಾಡು ಚನ್ನಗಿರಿ ತಾಲೂಕಿನ ಹರನಹಳ್ಳಿ ಕೆಂಗಾಪುರದಲ್ಲಿ ಶನಿವಾರ ಆರಂಭವಾಗಿದ್ದ ನುಡಿ ಜಾತ್ರೆಗೆ ಭಾನುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು. ಹಿರಿಯ ಸಾಹಿತಿಗಳು, ಲೇಖಕರು, ಕವಿಗಳು, ಕನ್ನಡದ ಮನಸ್ಸುಗಳು ಇದಕ್ಕೆ ಸಾಕ್ಷಿಯಾದವು.

    ಸಾಹಿತ್ಯಾಸಕ್ತರ ಕೊರತೆ ನಡುವೆಯೂ ಸಾಹಿತ್ಯದ ಔತಣ ನೀಡಲು ಸಮ್ಮೇಳನ ಹಿಂದೆ ಬೀಳಲಿಲ್ಲ. ಇಂದಿನ ಜಾಗತಿಕರಣದ ಪ್ರಭಾವಳಿಯಲ್ಲಿ ಕನ್ನಡದ ಸ್ಥಿತಿಗತಿಗಳು ಹಾಗೂ ಸವಾಲುಗಳ ಬಗ್ಗೆ ಮುಕ್ತ ಚರ್ಚೆ ನಡೆಯಿತು.

    ಈಗಾಗಲೇ ಘೋಷಣೆಯಾದಂತೆ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿ ವಿಶೇಷಾಧಿಕಾರಿ ನೇಮಕ್ಕೆ ಒತ್ತಾಯ ಸೇರಿ ಆರು ಪ್ರಮುಖ ನಿರ್ಣಯಗಳನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನ ಕೈಗೊಂಡಿತು.

    ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲು, ಕೃಷಿ ಆಧರಿತ ಕೈಗಾರಿಕೆಗಳ ಸ್ಥಾಪನೆ, ಪ್ರವಾಸಿ ಸ್ಥಳಗಳ ಅಭಿವೃದ್ಧಿ, ದಾವಣಗೆರೆ ಜಿಲ್ಲೆಗೆ 25ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಹಿತ್ಯ ಕಾರ್ಯಕ್ರಮ ಆಯೋಜನೆ ಇವು ಇತರ ನಿರ್ಣಯಗಳು.

    ಸಮ್ಮೇಳನಾಧ್ಯಕ್ಷ ಯುಗಧರ್ಮ ರಾಮಣ್ಣ ಸಮ್ಮುಖದಲ್ಲಿ ಕೈಗೊಂಡ ಈ ನಿರ್ಣಯಗಳನ್ನು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಗೌರವ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ ಓದಿದರು. ಇವುಗಳ ಜಾರಿಗೆ ಮನವಿ ಮಾಡಿದರು.

    ಸಮಾರೋಪ ಭಾಷಣ ಮಾಡಿದ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಬಿ.ವಿ. ವಸಂತಕುಮಾರ, ಅಕ್ಷರ ಮತ್ತು ಸಂಸ್ಕಾರದಿಂದ ಜಾತಿ ಮೀರಿ ಬೆಳೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

    ಗ್ರಾಮೀಣ ಭಾಗದಲ್ಲಿ ಜಾತಿ, ಶೋಷಣೆಗಳು ಇಂದಿಗೂ ಜೀವಂತ ಇವೆ. ಮಕ್ಕಳನ್ನು ಸುಸಂಸ್ಕೃತರನ್ನಾಗಿ, ಶಕ್ತಿವಂತರನ್ನಾಗಿ ಮಾಡಲು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯವಿದೆ ಎಂದರು.

    ಹಿರಿಯ ಸಾಹಿತಿ ಯರ‌್ರಿಸ್ವಾಮಿ ಮಾತನಾಡಿ, ಕಾವ್ಯ ಮನದ ಮಾತು. ಅದನ್ನು ಹೃದಯಂತರಾಳದಿಂದ ಬರೆದರೆ ಮಾತ್ರ ಸಹೃದಯ ತಲುಪಲು ಸಾಧ್ಯ ಎಂದು ತಿಳಿಸಿದರು.

    ವಾಗ್ಮಿ ಪ್ರೊ. ಕೃಷ್ಣೇಗೌಡ ಮಾತನಾಡಿ, ಜಾಗತಿಕ ಭರಾಟೆಯ ಪ್ರಭಾವದಿಂದ ನಗರ ಪ್ರದೇಶದ ಜನರ ಮನೋಭಾವ ಬದಲಾಗುತ್ತಿದೆ. ಬಾಂಧವ್ಯ ಕಣ್ಮರೆಯಾಗುತ್ತಿದೆ. ನಾಡು, ನುಡಿ ವಿಚಾರಕ್ಕೆ ಬಂದರೆ ಗ್ರಾಮೀಣ ಭಾಗದಲ್ಲ್ಲಿ ಮಾತ್ರ ಕನ್ನಡದ ಅಸ್ತಿತ್ವ ಅಡಗಿದೆ ಎಂದು ಅಭಿಪ್ರಾಯಪಟ್ಟರು.

    ಅಧ್ಯಕ್ಷತೆ ವಹಿಸಿದ್ದ ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಮಾತನಾಡಿದರು. ನಾಡು ನುಡಿಗೆ ಸೇವೆ ಸಲ್ಲಿಸಿದ 37 ಸಾಧಕರಿಗೆ ಸನ್ಮಾನಿಸಲಾಯಿತು.

    ಸಮ್ಮೇಳನಾಧ್ಯಕ್ಷ ಯುಗಧರ್ಮ ರಾಮಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ತಾಲೂಕು ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಸಾಹಿತಿ ಸಿರಿಗೆರೆ ನಾಗರಾಜ ಮತ್ತಿತರರಿದ್ದರು.

             ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು

    • ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಘೋಷಣೆಗೆ ಪೂರಕವಾಗಿ ವಿಶೇಷಾಧಿಕಾರಿ ನೇಮಿಸಬೇಕು.
    • ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಎಲ್ಲ ಹಂತದ ಸರಕಾರಿ ಉದ್ಯೋಗದಲ್ಲಿ ಮೀಸಲು ಕಲ್ಪಿಸಬೇಕು.
    • ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಆಧಾರಿತ ಹಾಗೂ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆ ಆಗಬೇಕು.
    • ಸಂತೇಬೆನ್ನೂರು ಪುಷ್ಕರಣಿ, ಕೆಳದಿ ಚೆನ್ನಮ್ಮ ಕೋಟೆ, ಹೊದಿಗೆರೆ ಷಹಾಜಿ ಮಹಾರಾಜರ ಸಮಾಧಿ ಸ್ಥಳವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು.
    • ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಆಗಬೇಕು.
    • ದಾವಣಗೆರೆ ಜಿಲ್ಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಿರಿಯ, ಕಿರಿಯ ಸಾಹಿತಿಗಳನ್ನು ಒಳಗೊಂಡ ಸಾಹಿತ್ಯ ಕಾರ್ಯಕ್ರಮ ಆಯೋಜಿಸಿ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts