More

    ಅಶೋಕ ರೈಲ್ವೆಗೇಟ್ ಬಳಿ ಶೀಘ್ರದಲ್ಲಿ ಅಂಡರ್‌ಪಾಸ್

    ದಾವಣಗೆರೆ: ಅಶೋಕ ಚಿತ್ರಮಂದಿರ ಸಮೀಪದ ರೈಲ್ವೆಗೇಟ್ ಸಮಸ್ಯೆ ಕಳೆದ ನಾಲ್ಕೈದು ದಶಕಗಳಿಂದ ಇದೆ. ಇದನ್ನು ಪರಿಹರಿಸಲು ಏನೆಲ್ಲ ಅವಕಾಶವಿದೆ ಎಲ್ಲವನ್ನು ಬಳಸಿಕೊಂಡು ಇದಕ್ಕೆ ಮುಕ್ತಿ ನೀಡಲಾಗುವುದು. ಶೀಘ್ರವೇ ಅಂಡರ್‌ಪಾಸ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಶೋಕ ಚಿತ್ರಮಂದಿರದ ರೈಲ್ವೆ ಲೆವೆಲ್ ಕ್ರಾಸಿಂಗ್ ಕೆಳಸೇತುವೆ ನಿರ್ಮಾಣದ ವಿಷಯವಾಗಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಕೆಲ ದಶಕಗಳ ಈ ಸಮಸ್ಯೆ ಜಟಿಲಗೊಳ್ಳುತ್ತಿದೆ. ಪರಿಹರಿಸಲು ಇಲ್ಲಿರುವ ರೈಲ್ವೆ ಹಳಿಗೆ ಸಮಾನಾಂತರವಾಗಿ ಅಶೋಕ ಚಿತ್ರಮಂದಿರದ ರಸ್ತೆಯಿಂದ ಈರುಳ್ಳಿ ಮಾರ್ಕೆಟ್ ಸೇತುವೆಯವರೆಗೆ 60 ಅಡಿ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು ರಸ್ತೆಯನ್ನು ಪಾಲಿಕೆ ಅಥವಾ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಾಡಿಕೊಡಲಾಗುವುದು ಎಂದರು.

    ಹಾಲಿ ಇರುವ ಗೇಟನ್ನು ರೈಲ್ವೆ ಇಲಾಖೆ ತೆರವುಗೊಳಿಸಿ ಸದರಿ ಜಾಗದಲ್ಲಿ ಲಿಮಿಟೆಡ್ ಹೈಟ್ ಸಬ್‌ವೇ ಹಾಗೂ ಅಲ್ಲಿಂದ 800 ಮೀಟರ್ ದೂರದಲ್ಲಿ ಪುಷ್ಪಾಂಜಲಿ ಚಿತ್ರಮಂದಿರದ ಎದುರು 2 ದಾರಿಗಳುಳ್ಳ ಕೆಳ ಸೇತುವೆಯನ್ನು ನಿರ್ಮಾಣ ಮಾಡಲು ರೈಲ್ವೆ ಇಲಾಖೆ 35 ಕೋಟಿ ರೂ. ಅನುದಾನವನ್ನು ಒದಗಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.

    ಜ್ವಲಂತ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಆ ಸ್ಥಳದಲ್ಲಿರುವ ಖಾಸಗಿ ಜಮೀನಿನ ಮಾಲಿಕರ ಸಭೆ ಕರೆದು ಸಮಾನಾಂತರ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವಂತೆ ಮನವೊಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

    ಬೆಂಗಳೂರು ರೈಲ್ವೆ ಇಲಾಖೆ ಡೆಪ್ಯುಟಿ ಚೀಫ್ ಇಂಜಿನಿಯರ್ ದೇವೇಂದ್ರ ಗುಪ್ತ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ್ ಮೂರ್ತಿ, ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಕುಮಾರಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts