More

    ಪ್ರತಿ ಹೋಬಳಿಯಲ್ಲೂ ಸಿರಿಧಾನ್ಯ ಬೆಳೆ ಸಂಸ್ಕರಣಾ ಕೇಂದ್ರ

    ದಾವಣಗೆರೆ: ಸಿರಿಧಾನ್ಯ ಬೆಳೆಗಳನ್ನು ಉತ್ತೇಜಿಸಲು ಪ್ರತಿ ಹೋಬಳಿಗೆ ಒಂದು ಸಂಸ್ಕರಣಾ ಕೇಂದ್ರ ಆರಂಭಿಸಲು ಮುಖ್ಯಮಂತ್ರಿಗೆ ಒತ್ತಡ ಹಾಕಬೇಕಾಗುತ್ತದೆ ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್ ಸಲಹೆ ನೀಡಿದರು.

    ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಸಾರ ಭಾರತಿ, ಚಿತ್ರದುರ್ಗ ಆಕಾಶವಾಣಿ ಸಹಯೋಗದಲ್ಲಿ ಬುಧವಾರ ರೇಡಿಯೋ ಕಿಸಾನ್ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

    ಏಷ್ಯಾದ ಸಿರಿಧಾನ್ಯ ಉತ್ಪಾದನೆಯಲ್ಲಿ ಶೇ. 80ರಷ್ಟು ಪಾಲನ್ನು ಭಾರತ ಹೊಂದಿದೆ. ವರ್ಷಕ್ಕೆ 17 ಮಿಲಿಯನ್ ಟನ್ ಭಾರತ ಉತ್ಪಾದಿಸುವ ಮೂಲಕ ದೇಶವು ಮುಂಚೂಣಿಯಲ್ಲಿದೆ. ರಾಷ್ಟ್ರದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದರು.

    ಒಂದು ದೇಶದಲ್ಲಿ ಸುಲಭವಾಗಿ ಸಿರಿಧಾನ್ಯ ಬೆಳೆಯುತ್ತಿರುವುದು ವರದಾನ. ಬೆಳೆದ ಸಿರಿಧಾನ್ಯವನ್ನು ಸಂಸ್ಕರಣೆ, ಮೌಲ್ಯವರ್ಧನೆ ಮಾಡಬೇಕು. ಸಿರಿಧಾನ್ಯದಲ್ಲಿ ಹಳೆಯ ವೈಭವ ಮರುಕಳಿಸುವಂತೆ ಮಾಡಬೇಕು. ಶೇ. 70ರಷ್ಟು ಒಣಭೂಮಿ ಇರುವ ದಾವಣಗೆರೆ ಜಿಲ್ಲೆ ಸಿರಿಧಾನ್ಯ ಬೆಳೆಯಲು ಉತ್ತಮ ವಾತಾವರಣ ಹೊಂದಿದೆ ಎಂದರು.

    ಕರೊನೋತ್ತರ ಕಾಲದಲ್ಲಿ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಎಲ್ಲರಿಗೂ ಗೊತ್ತಾಗಿದೆ. ಆರೋಗ್ಯ, ಆನಂದ, ನೆಮ್ಮದಿಗೆ ಸಿರಿಧಾನ್ಯ ಕಾರಣವಾಗಿದೆ. ಜಿಲ್ಲೆಯಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚಾಗಿ ಸಿರಿಧಾನ್ಯ ಬಳಸಬೇಕು ಎಂದರು.

    ಕೃಷಿ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ, ಮಾರುಕಟ್ಟೆಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಸಿರಿಧಾನ್ಯ ಬೆಳೆದ ರೈತನಿಗೆ ಪ್ರತಿ ಹೆಕ್ಟೇರ್‌ಗೆ 6500 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಪಿಎಂ ಕಿಸಾನ್ ಯೋಜನೆಯಡಿ 2 ಸಾವಿರ ರೂ. ಅಲ್ಲದೇ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದೆ. ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರತ್ಯೇಕ ಕೃಷಿ ನಿರ್ದೇಶನಾಲಯ ಆರಂಭವಾಗಿರುವುದರಿಂದ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

    ಆಕಾಶವಾಣಿ ಚಿತ್ರದುರ್ಗದ ಮುಖ್ಯಸ್ಥ ಎಂ.ರೇಣುಕಾಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ತಜ್ಞರಾದ ಬಿ.ಒ.ಮಲ್ಲಿಕಾರ್ಜುನ, ಡಾ.ಎ.ಎಂ. ಮಾರುತೇಶ, ಡಾ.ಬಿ. ಗಂಗಾಧರ ಉಪನ್ಯಾಸ ನೀಡಿದರು. ಸರೋಜಮ್ಮ ಪಾಟೀಲ್, ಎಂ.ಶೋಭಾ, ಆರ್.ಎಸ್.ರಘು, ಜಿ.ಎಸ್. ಶ್ವೇತಾ ಸಿರಿಧಾನ್ಯ ಮೌಲ್ಯವರ್ಧನೆಯ ಅನುಭವ ಹಂಚಿಕೊಂಡರು.

    ಡಿ.ಕಾವ್ಯ ಅವರಿಗೆ ನೇಗಿಲ ಜಗಲಿ ಕಾರ್ಯಕ್ರಮದ ಬಹುಮಾನ ವಿತರಿಸಲಾಯಿತು. ಬಿ.ಸಿದ್ದಣ್ಣ ಪ್ರಾಸ್ತಾವಿಕ ಮಾತನಾಡಿದರು. ಎಂ.ಜಿ. ಬಸವನಗೌಡ ಸ್ವಾಗತಿಸಿದರು. ಎಂ.ಎಸ್. ದ್ಯಾಮಲಾಂಬಿಕಾ ಸ್ವಾಗತಿಸಿದರು. ಜೆ.ರಘುರಾಜ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts