More

    ಎಸ್ಸೆಸ್ಸೆಂಗೆ 3ನೇ ಬಾರಿ ಒಲಿದ ಸಚಿವ ಸ್ಥಾನ

    ರಮೇಶ ಜಹಗೀರದಾರ್ ದಾವಣಗೆರೆ
     ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ 3ನೇ ಬಾರಿಗೆ ಸಚಿವ ಸ್ಥಾನ ಒಲಿದಿದೆ. ಇದರೊಂದಿಗೆ 5 ವರ್ಷಗಳ ನಂತರ ಮತ್ತೆ ಸ್ಥಳೀಯರೇ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿದ್ದಾರೆ.
     ರಾಜ್ಯದಲ್ಲಿ 2018 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ತುಮಕೂರು ಜಿಲ್ಲೆಯ ಗುಬ್ಬಿ ಶ್ರೀನಿವಾಸ್ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
     ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೊದಲು ಕೆ.ಎಸ್. ಈಶ್ವರಪ್ಪ, ನಂತರ ಬೈರತಿ ಬಸವರಾಜ ಅವರಿಗೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು.
     ಬೇರೆ ಜಿಲ್ಲೆಯವರಾದರೆ ಯಾವಾಗಲೋ ಬಂದು ಹೋಗುತ್ತಾರೆ, ಸ್ಥಳೀಯ ಆಡಳಿತದ ಮೇಲೆ ಹಿಡಿತ ಇರುವುದಿಲ್ಲ, ಜನರ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಆಗುವುದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯರೇ ಜಿಲ್ಲಾ ಮಂತ್ರಿಯಾದರೆ ಒಳ್ಳೆಯದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
     ಆದರೆ ಇದೆಲ್ಲವೂ ರಾಜಕೀಯ ಪರಿಸ್ಥಿತಿಯ ಮೇಲೆ ಅವಲಂಬನೆ ಆಗುವುದರಿಂದ ಕೆಲವೊಮ್ಮೆ ಹೊರ ಜಿಲ್ಲೆಯವರು ಉಸ್ತುವಾರಿ ವಹಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಕಳೆದ 5 ವರ್ಷಗಳಲ್ಲಿ ಆಗಿದ್ದೂ ಅದೇ.
     ಈಗ ಪರಿಸ್ಥಿತಿ ಬದಲಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಹಿಡಿತ ಸಾಧಿಸಿದ್ದು ಎಸ್.ಎಸ್. ಮಲ್ಲಿಕಾರ್ಜುನ್ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೇ ಜಿಲ್ಲಾ ಉಸ್ತುವಾರಿ ಮಂತ್ರಿಯಾಗುವುದು ಫಿಕ್ಸ್.
     ಮಲ್ಲಿಕಾರ್ಜುನ್ ತಮ್ಮ ರಾಜಕೀಯ ಜೀವನ ಆರಂಭಿಸಿದ್ದು 1998ರಲ್ಲಿ. ಅವರ ತಂದೆ ಶಾಮನೂರು ಶಿವಶಂಕರಪ್ಪ 1998ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ನಡೆದ ಉಪ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಎಸ್ಸೆಸ್ಸೆಂ ಮೊದಲ ಬಾರಿ ಆಯ್ಕೆಯಾಗಿ 1 ವರ್ಷ, 3 ತಿಂಗಳು ಶಾಸಕರಾಗಿ ಕೆಲಸ ಮಾಡಿದರು.
     ಅದಾದ ನಂತರ 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಪುನರಾಯ್ಕೆಯಾದರು. ಅಷ್ಟೇ ಅಲ್ಲ, ಎಸ್.ಎಂ. ಕೃಷ್ಣ ಸಂಪುಟದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಖಾತೆಯ ರಾಜ್ಯ ಸಚಿವರೂ ಆದರು.
     2004ರಲ್ಲಿ ಶಾಮನೂರು ಶಿವಶಂಕರಪ್ಪ ದಾವಣಗೆರೆ ಕ್ಷೇತ್ರದಿಂದ ಶಾಸಕರಾದರು. ಆಗ ಮಲ್ಲಿಕಾರ್ಜುನ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡರು. 2009, 2014ರಲ್ಲೂ ಸಂಸತ್‌ಗೆ ಆಯ್ಕೆಯಾಗಲಿಲ್ಲ.
     ಆದರೆ 2013 ರಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ಸಿದ್ದರಾಮಯ್ಯ ಸಂಪುಟದಲ್ಲಿ ಎರಡೂವರೆ ವರ್ಷ ಸಚಿವರಾಗಿ ಕೆಲಸ ಮಾಡಿದರು. 2018 ರಲ್ಲಿ ಅಚ್ಚರಿಯ ಸೋಲು ಕಂಡರು.
     ಅದಾದ 5 ವರ್ಷಗಳ ಬಳಿಕ ಅದೃಷ್ಟ ಮತ್ತೆ ಅವರನ್ನು ಹುಡುಕಿಕೊಂಡು ಬಂದಿದೆ. ದಾವಣಗೆರೆ ಉತ್ತರ ಕ್ಷೇತ್ರದ ಜನರು ಮತ್ತೊಮ್ಮೆ ಅವರ ಕೈ ಹಿಡಿದಿದ್ದಾರೆ. ಈಗ ಸಚಿವ ಪದವಿಯೂ ಒಲಿದು ಬಂದಿದೆ.
     …
     (ಕೋಟ್)
     ಸಚಿವ ಸ್ಥಾನ ನನಗೆ ಹೊಸದೇನಲ್ಲ. ಈಗ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜಿಲ್ಲೆಯನ್ನು ಉತ್ತಮವಾಗಿ ಅಭಿವೃದ್ಧಿ ಮಾಡುವ ಕಡೆಗೆ ಗಮನ ಹರಿಸುತ್ತೇನೆ.
      ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ

     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts