More

    ಸಾಧನೆಯ ಹಾದಿಯಲ್ಲಿ ನಿರ್ದಿಷ್ಟ ಗುರಿ ಅಗತ್ಯ

    ದಾವಣಗೆರೆ : ವಿದ್ಯಾರ್ಥಿಗಳು ಭವಿಷ್ಯದ ಕನಸು ಕಾಣಬೇಕು. ನಿರ್ದಿಷ್ಟ ಗುರಿಯೊಂದಿಗೆ ಸಾಧನೆಯ ಮಾರ್ಗದಲ್ಲಿ ಸಾಗಬೇಕು ಎಂದು ಜವಳಿ ವರ್ತಕ ಬಿ.ಸಿ. ಉಮಾಪತಿ ಹೇಳಿದರು.
    ನಗರದ ಎಸ್.ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ, 2021-22ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಕ್ರೀಡಾ ಸ್ಪರ್ಧೆ ವಿಜೇತರು ಮತ್ತು ರ‌್ಯಾಂಕ್ ಪಡೆದವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
    ಇಂದಿನ ವಿದ್ಯಾರ್ಥಿಗಳು ಪುಣ್ಯವಂತರು. ಅವರಿಗೆ ಬಹಳಷ್ಟು ಸೌಲಭ್ಯಗಳಿದ್ದು ಅವುಗಳನ್ನು ಬಳಸಿಕೊಳ್ಳಬೇಕು. ತಂದೆ-ತಾಯಿಗಳ ಪ್ರೋತ್ಸಾಹದಿಂದ ಬೆಳೆಯಬೇಕು. ಸಂಸ್ಕಾರವಂತರಾಗಬೇಕು. ಎಲ್ಲ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ, ಆಸಕ್ತಿಯಿಂದ ಓದಿ ಅರ್ಥ ಮಾಡಿಕೊಂಡರೆ ಯಶಸ್ಸು ದೊರೆಯುತ್ತದೆ. ತಾವೂ ಕೂಡಾ ಗುರಿ ಇಟ್ಟುಕೊಂಡೇ ಈ ಮಟ್ಟಕ್ಕೆ ತಲುಪಿರುವುದಾಗಿ ತಿಳಿಸಿದರು.
    ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಉದ್ದೇಶದಿಂದ 1991 ರಲ್ಲಿ ಎಸ್‌ಬಿಸಿ ಕಾಲೇಜನ್ನು ಆರಂಭಿಸಲಾಯಿತು. ಆಗ ಕೇವಲ 17 ವಿದ್ಯಾರ್ಥಿನಿಯರಿದ್ದರು. ಈಗ ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದರು.
    ಶ್ರೀ ವಿನಾಯಕ ಎಜುಕೇಶನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಅಥಣಿ ವೀರಣ್ಣ ಮಾತನಾಡಿ, ಹಿಂದಿನ ದಿನಗಳಿಗೆ ಹೋಲಿಸಿದರೆ ಈಗಿನ ಕಾಲದ ವಿದ್ಯಾರ್ಥಿಗಳು ಜಾಣರಿದ್ದಾರೆ, ಪ್ರತಿಭಾವಂತರಿದ್ದಾರೆ. ಕನಸು ಕಟ್ಟಿ ಅದನ್ನು ನನಸಾಗಿಸಲು ಪ್ರಯತ್ನಿಸಬೇಕು. ವಿದ್ಯೆಯ ಜತೆಗೆ ಬುದ್ಧಿವಂತಿಕೆಯೂ ಇರಬೇಕು ಎಂದು ಕಿವಿಮಾತು ಹೇಳಿದರು.
    ಇ.ಎನ್.ಟಿ ತಜ್ಞ ಡಾ. ಎ.ಎಂ. ಶಿವಕುಮಾರ್ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಓದು ಮತ್ತು ಆಟ ಸಮ್ಮಿಳಿತಗೊಳ್ಳಬೇಕು. ವಿದ್ಯೆಯ ಜತೆಗೆ ವಿನಯವಂತಿಕೆಯೂ ಇರಬೇಕು. ಕ್ರೀಡಾ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿದ ಪಿ.ಟಿ. ಉಷಾ, ಸರಳತೆಗೆ ಹೆಸರಾದ ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಅವರು ನಿಮಗೆ ಆದರ್ಶವಾಗಬೇಕು, ಅವರ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಸಮಾಜದಲ್ಲಿ ಗುರುಗಳಿಗೆ ಮಹತ್ವದ ಸ್ಥಾನವಿದೆ. ಅವರ ಮಾರ್ಗದರ್ಶನದಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು, ಸಾರ್ಥಕತೆಯನ್ನು ಹೊಂದಬೇಕು ಎಂದು ತಿಳಿಸಿದರು.
    ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವ ಜತೆಗೆ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು. ಸಂವಹನ ಕೌಶಲ ಮತ್ತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಕಾಲೇಜು ಹಂತದಲ್ಲೇ ಯೋಜನೆ ರೂಪಿಸಿಕೊಂಡು ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
    ಇದೇ ವೇಳೆ ರ‌್ಯಾಂಕ್ ವಿಜೇತರಾದ ಸಿ.ವಿ. ರೇಖಾ, ಬಿ.ಆರ್. ಅನಿತಾ, ಎನ್. ಚೇತನಾ, ಎಚ್. ದೀಪಾ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಯಿತು. ಕಾಲೇಜು ಪ್ರಾಂಶುಪಾಲ ಡಾ. ಕೆ. ಷಣ್ಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts