More

    ರಾಷ್ಟ್ರೋತ್ಥಾನ ಶಾಲೆಯಲ್ಲಿ ಯೋಗ ದಿನಾಚರಣೆ

    ದಾವಣಗೆರೆ : ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ವಾಹಿನಿ ಸಹಯೋಗದಲ್ಲಿ ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
     ರಾತ್ರಿ ಬಂದ ಮಳೆಯಿಂದ ವಾತಾವರಣ ತಂಪಾಗಿತ್ತು. ಸಮವಸ್ತ್ರ ಧರಿಸಿ ಮ್ಯಾಟ್‌ನೊಂದಿಗೆ ಬಂದಿದ್ದ ಮಕ್ಕಳು ಶಿಸ್ತುಬದ್ಧವಾಗಿ ಯೋಗ ಪ್ರದರ್ಶನ ನೀಡಿದರು. ಯೋಗ ಶಿಕ್ಷಕ ರಮೇಶ್ ಮಾರ್ಗದರ್ಶನ ನೀಡಿದರು.
     ಚಿನ್ಮುದ್ರೆಯಲ್ಲಿ ಕಣ್ಮುಚ್ಚಿ ಕುಳಿತ ಮಕ್ಕಳು ಉಸಿರಾಟ ಕ್ರಿಯೆಯ ಜತೆಗೆ ಓಂಕಾರ ಮಂತ್ರ ಪಠಿಸಿದರು. ಸೂರ್ಯ ನಮಸ್ಕಾರದಿಂದ ಆರಂಭಿಸಿ ಒಂದೊಂದಾಗಿ ಆಸನಗಳನ್ನು ಹಾಕಿದರು. ಊರ್ಧ್ವಾಸನ, ಹಸ್ತಪಾದಾಸನ, ದಂಡಾಸನ, ಭುಜಂಗಾಸನ, ಪರ್ವತಾಸನ, ಅರ್ಧ ಚಕ್ರಾಸನ, ತಾಡಾಸನ, ವೀರಭದ್ರಾಸನ, ಮಕರಾಸನ, ಸೇತು ಬಂಧಾಸನಗಳನ್ನು ಕ್ರಮಬದ್ಧವಾಗಿ ಪ್ರದರ್ಶಿಸಿದರು.
     ಆಗಾಗ ನಮಸ್ಕಾರ ಮುದ್ರೆ, ಸಮಸ್ಥಿತಿಯಲ್ಲಿ ಕುಳಿತರು. ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರಗಳನ್ನು ಪಠಿಸಿದರು. ಕೊನೆಯಲ್ಲಿ ಶೈಕ್ಷಣಿಕ ಸಂಯೋಜಕ ಶಿವರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಯೋಗ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಿಂದು ಸ್ವಾಗತ, ಶಶಾಂಕ್ ಆರ್. ಆಚಾರ್ಯ ವಂದನಾರ್ಪಣೆ ಮಾಡಿದರು. ವಿಶ್ವ ಸಂಗೀತ ದಿನವೂ ಆಗಿರುವುದರಿಂದ ವಿದ್ಯಾರ್ಥಿಗಳು ಸುಶ್ರಾವ್ಯ ಗಾಯನ ಮಾಡಿದರು.
     ರಾಷ್ಟ್ರೋತ್ಥಾನ ವಿದ್ಯಾಲಯ, ವಿದ್ಯಾಕೇಂದ್ರ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮೀಪದ ಕೆ.ಎಸ್.ಎಸ್. ಮತ್ತು ರಾಘವೇಂದ್ರ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಶಿಕ್ಷಕಿಯರು, ಪಾಲಕರು ಭಾಗವಹಿಸಿದ್ದರು.
     …
     * ಯೋಗ ಸಾಧನೆಯಿಂದ ವಿಶ್ವ ಶಾಂತಿ
     ಯೋಗ ಸಾಧನೆಯಿಂದ ವಿಶ್ವವೇ ಒಂದು ಕುಟುಂಬವಾಗಿ ಯುದ್ಧ, ಸಂಘರ್ಷಗಳಿಗೆ ಪೂರ್ಣವಿರಾಮ ಹಾಕುವ ಮೂಲಕ ಶಾಂತಿ ನೆಲೆಸುವಂತೆ ಮಾಡಬಹುದು ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಇಂಜಿನಿಯರ್, ಆರ್‌ಎಸ್‌ಎಸ್ ವಿಭಾಗ ಪ್ರಮುಖ್ ಉಮಾಪತಿ ಅಭಿಪ್ರಾಯಪಟ್ಟರು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಯೋಗವನ್ನು ಅಳವಡಿಸಿಕೊಳ್ಳುವುದರಿಂದ ವೈಯಕ್ತಿಕ ಬದುಕು, ಕೌಟುಂಬಿಕ ವ್ಯವಸ್ಥೆ ಮತ್ತು ಸಾಮಾಜಿಕ ಜೀವನ ಹಸನಾಗುತ್ತದೆ. ನಾವೆಲ್ಲ ಒಂದು ಎಂಬ ಭಾವನೆ ಮೂಡುತ್ತದೆ ಎಂದು ತಿಳಿಸಿದರು.
     ಯೋಗವೆಂದರೆ ಕೇವಲ ಕೈಕಾಲು ಆಡಿಸಿ ಆಸನಗಳನ್ನು ಹಾಕುವುದಷ್ಟೇ ಅಲ್ಲ, ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮದ ನಡುವೆ ಏಕಾತ್ಮಕತೆ ಮೂಡಿಸಿ ಸಮಗ್ರ ಬೆಳವಣಿಗೆಗೆ ಕಾರಣವಾಗುವ ಸಾಧನ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts