More

    21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇನ್ನಿತರ ಇಲಾಖೆಗಳು, ಜಿಲ್ಲಾ ಯೋಗ ಒಕ್ಕೂಟ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ 9ನೇ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 21 ರಂದು ಬೆಳಗ್ಗೆ 5 ಗಂಟೆಗೆ ನಗರದ ದೇವರಾಜ ಅರಸು ಬಡಾವಣೆಯ ‘ಬಿ’ ಬ್ಲಾಕ್‌ನ ಈಜುಕೊಳ ಹತ್ತಿರದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
     ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ 4 ರಿಂದ 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
     ‘ವಿಶ್ವ ಕುಟುಂಬಕ್ಕಾಗಿ ಯೋಗ’ ಮತ್ತು ‘ಪ್ರತಿ ಅಂಗಳದಲ್ಲಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ 6ರ ವರೆಗೆ ಬ್ರಹ್ಮಕುಮಾರಿ ಅವರಿಂದ ಧ್ಯಾನ, 6 ರಿಂದ 6.20ರ ವರೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರಿಂದ ಅಷ್ಠ ನಮಸ್ಕಾರ, 6.20 ರಿಂದ 6.55ರ ವರೆಗೆ ಉದ್ಘಾಟನೆ ಮತ್ತು ವೇದಿಕೆ ಕಾರ್ಯಕ್ರಮ ನಡೆಯಲಿದೆ. 7 ರಿಂದ 7.45 ರ ವರೆಗೆ ಸಾಮಾನ್ಯ ಯೋಗ ಶಿಷ್ಟಾಚಾರ ಇರುತ್ತದೆ. ವೈದ್ಯಶ್ರೀ ಚನ್ನಬಸವಣ್ಣ ಅವರು ಯೋಗ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
     ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ ಸೇರಿ ವಿವಿಧ ಜನಪ್ರತಿನಿಧಿಗಳು, ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ, ಆಯುಷ್ ಇಲಾಖೆಯ ಆಯುಕ್ತ ಜೆ. ಮಂಜುನಾಥ, ಪೂರ್ವ ವಲಯ ಐಜಿಪಿ ಡಾ.ಕೆ. ತ್ಯಾಗರಾಜನ್ ಭಾಗವಹಿಸುವರು ಎಂದು ಹೇಳಿದರು.
     ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಬೃಹತ್ ಯೋಗ ಶಿಬಿರ ಮಂಗಳವಾರ ಬೆಳಗ್ಗೆ 6.30ಕ್ಕೆ ಮುಕ್ತಾಯವಾಗಲಿದೆ. 70-80 ಕಡೆಗಳಲ್ಲಿ ಶಿಬಿರಗಳು ನಡೆದಿವೆ ಎಂದು ತಿಳಿಸಿದರು.
     ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಂಚಾಲಕಿ ಲೀಲಾಜಿ, ಶ್ರೀ ಪತಂಜಲಿ ಶಿಕ್ಷಣ ಸಮಿತಿ ಉಪಾಧ್ಯಕ್ಷ ಎಸ್.ಎಚ್. ಕಲ್ಲೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಇದ್ದರು.
     …
     * ಕುಡಿಯುವ ನೀರಿನ ಸಮಸ್ಯೆ ಇಲ್ಲ
     ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಆದರೆ ಅದರಿಂದ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇದುವರೆಗೆ ಆಗಿಲ್ಲ. ನ್ಯಾಮತಿ ತಾಲೂಕಿನಲ್ಲ ತುಂಗಭದ್ರಾ ನದಿಯಲ್ಲಿ ಮರಳು ಚೀಲಗಳ ಬದು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು ಜಾಕ್‌ವೆಲ್‌ಗೆ ಹರಿಯುವಂತೆ ಮಾಡಲಾಗಿದೆ. ಅದೇ ತಾಲೂಕಿನ 4 ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
     ಗೃಹಜ್ಯೋತಿ ಯೋಜನೆಯಡಿ ಸೋಮವಾರ ಸಂಜೆ 5ರ ವರೆಗೆ ಜಿಲ್ಲೆಯಲ್ಲಿ 10,836 ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ತಿಳಿಸಿದರು.
     ಜಿಲ್ಲೆಯಲ್ಲಿ 4.83 ಲಕ್ಷ ವಿದ್ಯುತ್ ಸಂಪರ್ಕಗಳಿದ್ದು ಅವುಗಳ ಪೈಕಿ 4.63 ಲಕ್ಷ ಸಂಪರ್ಕಗಳಲ್ಲಿ 200 ಯೂನಿಟ್‌ನ ಒಳಗೆ ಬಳಸಲಾಗುತ್ತಿದೆ (ಶೇ. 97.8 ರಷ್ಟು). ಜಿಲ್ಲೆಯ ಅತಿಹೆಚ್ಚು ಗ್ರಾಹಕರಿಗೆ ಯೋಜನೆಯ ಲಾಭ ದೊರೆಯಲಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts