More

    ಆತ್ಮಾನಂದದ ಬೆಳಕಿನ ಮಾರ್ಗ ತೋರುವ ಗುರು

    ದಾವಣಗೆರೆ : ನಮ್ಮೊಳಗಿನ ಅಂಧಕಾರವನ್ನು ಹೋಗಲಾಡಿಸಲು ಬೆಳಕಿನ ಮಾರ್ಗದೆಡೆಗೆ ಕೊಂಡೊಯ್ದು ಆತ್ಮಾನಂದ ಕರುಣಿಸುವವನೇ ನಿಜವಾದ ಗುರು ಎಂದು ಶ್ರೀ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ವಿಶ್ಲೇಷಿಸಿದರು.
     ನಗರದ ದೇವರಾಜ ಅರಸು ಬಡಾವಣೆಯ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಸೋಮವಾರ, ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಗುರುಪೂರ್ಣಿಮೆಯ ವಿಶೇಷತೆ ಮತ್ತು ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
     ಗುರುವೇ ನಿಜವಾದ ದೇವರು. ಅದೊಂದು ದಿವ್ಯ ಶಕ್ತಿ. ಪೂರ್ಣ ಚಂದ್ರನಂತೆ ಪೂರ್ಣ ಜ್ಞಾನವನ್ನು ಹೊಂದಿರುವವನು ಗುರು ಸ್ಥಾನವನ್ನು ತುಂಬಬಲ್ಲನು. ಜೀವಾತ್ಮದಿಂದ ಪರಮಾತ್ಮ ತತ್ವದೆಡೆಗೆ ಕೊಂಡೊಯ್ಯುವುದು ಗುರುವಿಗೆ ಮಾತ್ರ ಸಾಧ್ಯ ಎಂದು ಹೇಳಿದರು.
     ಶ್ರದ್ಧೆ ಎಂದರೆ ಭಾವನೆಯಲ್ಲಿ ಭಕ್ತಿಯನ್ನು ತುಂಬುವುದು. ಆಷಾಢ ಹುಣ್ಣಿಮೆಯ ಈ ದಿನದಂದು ಸದ್ಗುರುವನ್ನು ಶ್ರದ್ಧೆಯಿಂದ ಪೂಜಿಸಿ ಭಕ್ತಿ ಸಮರ್ಪಿಸುವುದೇ ಗುರುಪೂರ್ಣಿಮೆಯ ವಿಶೇಷತೆಯಾಗಿದೆ ಎಂದ ಶ್ರೀಗಳು ಶ್ರದ್ಧೆ, ಭಕ್ತಿ, ಭಾವನೆ, ಶಿಸ್ತುಗಳ ಮೂಲಕ ಗುರುವಿನ ಒಲುಮೆ ಹೇಗೆ ಸಾಧ್ಯ ಎಂಬುದನ್ನು ಉದಾಹರಿಸಿದರು.
     ಆರಂಭದಲ್ಲಿ ಆದರ್ಶ ಯೋಗ ಪ್ರತಿಷ್ಠಾನದ ಯೋಗ ಗುರು ಡಾ. ರಾಘವೇಂದ್ರ ಗುರೂಜಿ ಅಗ್ನಿಹೋತ್ರ ಹೋಮದೊಂದಿಗೆ ಕೆಲವು ಮಂತ್ರಗಳನ್ನು ಹೇಳಿಕೊಟ್ಟರು. ನಂತರ ಶ್ರೀಗಳು ದೀಪ ಪ್ರಜ್ವಲನೆಗೊಳಿಸಿ ಗುರುಪಾದುಕೆಗೆ ವಂದಿಸಿದರು. ಮಹಾ ಮಂಗಳಾರತಿ, ಪ್ರಸಾದ ನೈವೇದ್ಯ, ಪೂಜಾ ಕಾರ್ಯವನ್ನು ಜೀವ ವಿಮಾ ನಿಗಮದ ಹಿರಿಯ ಅಧಿಕಾರಿ ಪಿ. ಶೇಷಾದ್ರಿ ದಂಪತಿ ನೆರವೇರಿಸಿದರು.
     ಹಣಕಾಸು ವ್ಯವಹಾರ ಸಲಹೆಗಾರ ಎಚ್. ಮಂಜುನಾಥ್, ನಿವೃತ್ತ ತಹಸೀಲ್ದಾರ್ ವಿಶ್ವನಾಥಯ್ಯ, ಸುಮಂಗಲಾ ಶೇಷಾದ್ರಿ, ಮುಕೇಶ್ ದೇವ್, ಎಚ್. ಸಂತೋಷ್, ಗೌರಮ್ಮ, ಬಾಳೆ ಎಲೆ ವ್ಯಾಪಾರಿ ರುದ್ರೇಶ್, ಜ್ಯೋತಿ ಲಕ್ಷ್ಮೀ ವಾಸುದೇವ್ ಪಾಲ್ಗೊಂಡಿದ್ದರು. ಗುರುಭಜನೆ ನಂತರ ಪ್ರಸಾದ ವಿನಿಯೋಗ ನಡೆಯಿತು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts