More

    ಸದನದ ಒಳಗೆ, ಹೊರಗೆ ಬಿಜೆಪಿ ಹೋರಾಟ

    ದಾವಣಗೆರೆ : ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ 5 ಭರವಸೆಗಳನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೆ ತರುವಂತೆ ಆಗ್ರಹಿಸಿ ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
     ನಗರದ ಅಭಿನವ ರೇಣುಕ ಮಂದಿರದಲ್ಲಿ ಗುರುವಾರ ಬಿಜೆಪಿಯ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸದನದ ಒಳಗೆ ಪಕ್ಷದ ಶಾಸಕರು ಹೋರಾಟ ಮಾಡುತ್ತಾರೆ. ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಾನು ಧರಣಿ ಕೂಡುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಪಕ್ಷದ ಮುಖಂಡರು ನನ್ನೊಂದಿಗೆ ಭಾಗವಹಿಸುತ್ತಾರೆ ಎಂದು ತಿಳಿಸಿದರು.
     ಅಧಿವೇಶನ ಜುಲೈ 4ರಿಂದ ಆರಂಭವಾಗಲಿದೆ. ರಾಜ್ಯಪಾಲರ ಭಾಷಣ ಮುಗಿದ ನಂತರ ಜುಲೈ 5ರಿಂದ ಧರಣಿ ಆರಂಭಿಸಿ ಅಧಿವೇಶನ ಮುಗಿಯುವ ವರೆಗೂ ಹೋರಾಟ ನಡೆಸಲಾಗುವುದು. ಸರ್ಕಾರದ ಮೂಗು ಹಿಡಿದು ಉಸಿರಾಡದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
     ಕಾಂಗ್ರೆಸ್‌ನವರು ಚುನಾವಣೆಗೆ ಮುಂಚೆ ಮನೆ ಮನೆಗೆ ಹೋಗಿ 5 ಗ್ಯಾರಂಟಿ ಯೋಜನೆಗಳ ಭರವಸೆಯ ಪತ್ರವನ್ನು ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಒಂದು ತಿಂಗಳು ಕಳೆದರೂ ಭರವಸೆಗಳನ್ನು ಈಡೇರಿಸದೆ ಜನರಿಗೆ ದ್ರೋಹ ಎಸಗಿದ್ದಾರೆ. ಕೊಟ್ಟ ಭರವಸೆಗಳನ್ನು ಜಾರಿಗೆ ತರದಿದ್ದರೆ ಸಹಿಸುವುದಿಲ್ಲ, ಸರ್ಕಾರದ ಕಿವಿ ಹಿಂಡಿ ಸರಿ ದಾರಿಗೆ ತರುತ್ತೇವೆ. ಅವರಿಂದ ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದರು.
     ರಾಜ್ಯ ಸರ್ಕಾರ ದಿವಾಳಿಯಾಗಿದೆ. ಫಸಲ್‌ಬಿಮಾ ಯೋಜನೆಯ ಹಣವನ್ನು ಇವರು ಪಾವತಿಸಿಲ್ಲ. ಆಡಳಿತ ನಡೆಸುವವರು ಜನಹಿತವನ್ನು ಮರೆತಿದ್ದಾರೆ, ರಾಜಕೀಯ ದೊಂಬರಾಟ ಆಡುತ್ತಿದ್ದಾರೆ. ಇದನ್ನು ನೋಡಿ ನಾವಂತೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ರವಾನಿಸಿದರು.
     ರಾಜ್ಯದಲ್ಲಿ ಕಾಂಗ್ರೆಸ್‌ನವರು ಮನ ಬಂದಂತೆ ಮಾತನಾಡುತ್ತಿದ್ದಾರೆ. ಉಚಿತವಾಗಿ ಅಕ್ಕಿ ಕೊಡಿ ಎಂದು ನಾವೇನೂ ಅವರಿಗೆ ಹೇಳಿರಲಿಲ್ಲ. ಅವರು ಕೇಂದ್ರದ ಕಡೆಗೆ ಬೆರಳು ತೋರಿಸುವುದು ಸರಿಯಲ್ಲ. ಅಕ್ಕಿ ಕೊಡುವುದಾಗಿ ಹೇಳಿದವರು ನೀವು. ಅದರ ವ್ಯವಸ್ಥೆಯನ್ನೂ ನೀವೇ ಮಾಡಬೇಕು. ಕೇಂದ್ರ ಸರ್ಕಾರ ಈಗಾಗಲೇ ನೀಡುತ್ತಿರುವ 5 ಕೆಜಿ ಅಕ್ಕಿಯ ಜತೆಗೆ ನೀವು 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿಯನ್ನು ನೀಡಬೇಕು. ಅಷ್ಟು ಸುಲಭವಾಗಿ ನಿಮ್ಮನ್ನು ಬಿಡುವುದಿಲ್ಲ ಎಂದು ಗುಡುಗಿದರು.
     ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಕೆಲವು ಸಚಿವರು ಹುಚ್ಚರಂತೆ ಮಾತನಾಡುತ್ತಿದ್ದಾರೆ. ಸರ್ವರ್ ಹ್ಯಾಕ್ ಮಾಡಲಾಗಿದೆ ಎಂದು ಒಬ್ಬ ಸಚಿವರು ಹೇಳಿದ್ದಾರೆ. ಆ ಬಗ್ಗೆ ಅವರು ದೂರು ಸಲ್ಲಿಸಲಿ ಎಂದರು.
     ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿದರು.
     …
     
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts