More

    ಲೈಂಗಿಕ ಕಿರುಕುಳ ತಡೆಗೆ ಸಮನ್ವಯ ಅಗತ್ಯ

    ದಾವಣಗೆರೆ : ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟಲು ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ಳ ಹೇಳಿದರು.
       ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
       ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಂದೆ ನಿತ್ಯ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣ ವರದಿಯಾಗುತ್ತಿವೆ. ಮಕ್ಕಳ ಹಕ್ಕುಗಳ ರಕ್ಷಣಾ ಕಾನೂನಿನ ಅರಿವಿನ ಕೊರತೆ ಇದೆ ಎಂದು ಪರಿಗಣಿಸಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
     ರಾಜ್ಯದಲ್ಲಿ 59000 ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಿವೆ. ವಿವಿಧ  ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು. ಕಾನೂನು ಶಿಕ್ಷಣ ಅಭ್ಯಸಿಸಬೇಕು. ಸಾಮಾಜಿಕ ನಿಯಮಗಳ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿ ತಿಳಿದುಕೊಂಡಾಗ ಕಾನೂನಾತ್ಮಕ ಜೀವನ ನಡೆಸಲು ಸಾಧ್ಯ ಎಂದರು.
     ರಾಜ್ಯದಲ್ಲಿ 28657 ಜನ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯರಾಗಿರುತ್ತಾರೆ. ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸಿದರೆ, ಈ ಅಂಕಿ ಅಂಶಗಳನ್ನು ಕಡಿಮೆ ಮಾಡಬಹುದು ಎಂದರು.
      2012 ರಿಂದ ಇಲ್ಲಿಯವರೆಗೆ 672 ಪೋಕ್ಸೋ ಪ್ರಕರಣ ದಾಖಲಾಗಿದ್ದು, 334ರಲ್ಲಿ ಶಿಕ್ಷೆಯಾಗಿದ್ದು 78 ಪ್ರಕರಣಗಳು ಬಾಕಿ ಉಳಿದಿವೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ,. ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವು ಇಲಾಖೆಗಳು ಸೇರಿ ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.
      ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾನೂನು ಹಲವಾರು ರೀತಿಯ ಅವಕಾಶ  ಮಾಡಿಕೊಟ್ಟಿದೆ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ ಉತ್ತಮವಾಗಿ ಬದುಕುವ ಹಾಗೂ ರಕ್ಷಣೆಯ ಹಕ್ಕು ಬೇಕಾಗಿದೆ ಎಂದರು.
     ಅತಿ ಹೆಚ್ಚು ಮಕ್ಕಳಿರುವ ದೇಶ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಿ ದೇಶದ ಮಾನವ ಸಂಪನ್ಮೂಲವಾಗಿ ರೂಪಿಸಬೇಕಾಗಿದೆ. ಇದಕ್ಕಾಗಿ ಅವರಿಗೆ ಉತ್ತಮ ವಾತಾವರಣ ಕಲ್ಪಿಸಿ, ಬದುಕು ಕಟ್ಟಿಕೊಡುವ ಮೂಲಕ ಅತ್ಯುತ್ತಮ ಪ್ರಜೆಗಳನ್ನಾಗಿಸಬೇಕಾಗಿದೆ ಎಂದರು.
      ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ ಮಾತನಾಡಿ ಸಮಾನತೆ, ಸಮಾನ ನ್ಯಾಯ, ನಾಗರಿಕತೆಯ ಸಂಕೇತ. ಪಿತೃ ಪ್ರಧಾನವಾದ ನಮ್ಮ ದೇಶದಲ್ಲಿ ಪುರುಷನೇ ಸಬಲ. ಸ್ತ್ರೀ ಅಬಲೆ ಎಂಬ ಶೋಷಣೆ ಇಲ್ಲದೆ ಮಹಿಳೆಗೂ ಸಮಾನ ಅವಕಾಶ ನೀಡಲು ವಿಶೇಷ ಕಾಯ್ದೆಗಳಿವೆ ಎಂದರು.  
      ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಎಎಸ್‌ಪಿ ವಿಜಯಕುಮಾರ್  ಎಂ.ಸಂತೋಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಬಾಲ ನ್ಯಾಯ ಮಂಡಳಿ ಸದಸ್ಯರಾದ ವಿಜಯಮಾಲಾ ಇತರರು ಇದ್ದರು.
     ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,  ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts