More

    ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಣೆ

    ದಾವಣಗೆರೆ: ಅಯೋಧ್ಯೆ ಶ್ರೀರಾಮಮಂದಿರಕ್ಕೆ ಸಮರ್ಪಿಸಲಿರುವ 11 ಲಕ್ಷ ರೂ. ವೆಚ್ಚದ, 15 ಕಿಲೋ ತೂಕದ ಬೆಳ್ಳಿ ಇಟ್ಟಿಗೆಯನ್ನು ಸ್ವಾಗತಿಸುವ ಕಾರ್ಯಕ್ರಮ ಅ.6ರಂದು ಪಿಜೆ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.

    ಇದಕ್ಕೂ ಪೂರ್ವದಲ್ಲಿ ವೆಂಕಟೇಶ್ವರ ವೃತ್ತದಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳ್ಳಿ ಇಟ್ಟಿಗೆಯನ್ನು ರಾಮರಥದಲ್ಲಿರಿಸಿ ಪೂಜಿಸಿ, ಪಿಜೆ ಬಡಾವಣೆಯವರೆಗೆ ಬೈಕ್ ರ‌್ಯಾಲಿ ಮೂಲಕ ಕರೆತರಲಾಗುವುದು ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಕರಸೇವಕರಿಂದ 1990ರಲ್ಲಿ ಅಕ್ಟೋಬರ್ 6ರಂದು ರಾಮಜ್ಯೋತಿ ರಥಯಾತ್ರೆ ನಡೆದಿತ್ತು. ಅಂದು ಬೇತೂರು ರಸ್ತೆ ವೆಂಕಟೇಶ್ವರ ವೃತ್ತದಲ್ಲಿ ನಡೆದ ಗೋಲಿಬಾರ್‌ನಲ್ಲಿ ಚಂದ್ರಶೇಖರರಾವ್ ಶಿಂಧೆ, ಶಿವಾಜಿರಾವ್ ಘಾಟ್ಗೆ, ಆರ್.ಜಿ.ಶ್ರೀನಿವಾಸ, ಅಂಬರೀಷ್, ಹಮಾಲಿ ಚಿನ್ನಪ್ಪ, ಎಚ್.ನಾಗರಾಜ್, ಸಾವಳಗಿ ರಾಮಕೃಷ್ಣ, ಎಲೆಬೇತೂರು ದುಗ್ಗಪ್ಪ ಅವರು ಹುತಾತ್ಮರಾಗಿದ್ದರು.

    ಆ.5ರಂದು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಡಿ ಗಲ್ಲು ಹಾಕಲಾಗಿದ್ದು, ಅನೇಕರ ಬಯಕೆ ಈಡೇರಿದೆ. ಹೀಗಾಗಿ ಶ್ರೀರಾಮ, ಅಯೋಧ್ಯೆಯ ಮಂದಿರ ಚಿತ್ರಗಳುಳ್ಳ ಹಾಗೂ ಎಂಟು ಹುತಾತ್ಮರ ಹೆಸರನ್ನು ಮುದ್ರಿಸಿದ ಬೆಳ್ಳಿ ಇಟ್ಟಿಗೆಯನ್ನು ಉಡುಪಿಯ ಪೇಜಾವರ ಶ್ರೀಗಳ ಮೂಲಕ ಅಥವಾ ಹಿಂದುಪರ ಸಂಘಟನೆಗಳ ಮುಖಂಡರೇ ನೇರವಾಗಿ ಅಯೋಧ್ಯೆಗೆ ಬರುವ ದಿನದಲ್ಲಿ ಸಮರ್ಪಿಸಲಾಗುವುದು ಎಂದರು.

    ದಾವಣಗೆರೆಯ ಘಟನೆಯಲ್ಲಿ ಹುತಾತ್ಮರಾದ ಕುಟುಂಬಗಳಿಗೆ ಶೀಘ್ರದಲ್ಲೇ ಶ್ರೀರಾಮನ ಚಿತ್ರವುಳ್ಳ ಬೆಳ್ಳಿ ಡಾಲರ್ ನೀಡಿ ಸನ್ಮಾನಿಸಲಾಗುವುದು. ಅ.6ರ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ರ.ರವೀಂದ್ರನಾಥ್, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮೇಯರ್ ಬಿ.ಜಿ.ಅಜಯಕುಮಾರ್, ಉಪಮೇಯರ್ ಸೌಮ್ಯ ನರೇಂದ್ರಕುಮಾರ್ ಇತರರು ಭಾಗವಹಿಸುವರು ಎಂದು ತಿಳಿಸಿದರು.

    ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಎಲ್.ಡಿ.ಗೋಣೆಪ್ಪ, ಶಿವಪ್ರಕಾಶ್, ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ್, ಮುಖಂಡ ಟಿಂಕರ್ ಮಂಜಣ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts