More

    ಮಹಾ ಅಧಿವೇಶನ ಶಕ್ತಿ ಪ್ರದರ್ಶನಕ್ಕೆ ವೇದಿಕೆ

    ದಾವಣಗೆರೆ : ಡಿ. 23 ಮತ್ತು 24 ರಂದು ನಗರದಲ್ಲಿ ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನವು ಸಮಾಜದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ ಎಂದು ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
     ಮಹಾಸಭಾದ ಪದಾಧಿಕಾರಿಗಳು ಸೋಮವಾರ ತಮ್ಮ ನಿವಾಸಕ್ಕೆ ಭೇಟಿ ನೀಡಿ ಮಹಾ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
     ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸಮಾವೇಶದಲ್ಲಿ ಮುಖ್ಯವಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
     ಜಾತಿ ಗಣತಿಯನ್ನು ನಾನು ಮಾತ್ರವಲ್ಲ, ಒಕ್ಕಲಿಗರು ಸೇರಿ ಬಹಳ ಜನ ವಿರೋಧಿಸಿದ್ದಾರೆ. ಕಾರಣವಿಲ್ಲದೇ ವಿರೋಧಿಸುವರೆ ಎಂದು ಮರು ಪ್ರಶ್ನಿಸಿದರು.
     ಮಹಾ ಅಧಿವೇಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿ, ಇದು ವೀರಶೈವ ಲಿಂಗಾಯತ ಸಮಾಜದ ಕಾರ್ಯಕ್ರಮ ಆಗಿರುವುದರಿಂದ ಸಮಾಜದವರನ್ನು ಮಾತ್ರ ಕರೆಯಲಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಪ್ರತಿಕ್ರಿಯಿಸಿದರು.
     ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯದವರೂ ಸೇರಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವರು. ಅವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
     ಮಹಾಸಭಾ ಉಪಾಧ್ಯಕ್ಷ ಅಥಣಿ ಎಸ್. ವೀರಣ್ಣ ಮಾತನಾಡಿ, ಕೆಲವರಿಗೆ ಆಹ್ವಾನ ಪತ್ರಿಕೆ ತಲುಪದೇ ಇರಬಹುದು, ಸಣ್ಣಪುಟ್ಟ ಲೋಪ ಆಗಿರಬಹುದು. ಸಮಾಜದ ದಾವಣಗೆರೆ ಮತ್ತು ಸುತ್ತಮುತ್ತಲಿನ ಜನರು ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
     ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ನಾಡಿನ ಮಠಾಧೀಶರ ಆಶೀರ್ವಾದದಿಂದ ಅಧಿವೇಶನ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
     ಮಹಾಸಭಾದ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್, ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ, ವಾಣಿಜ್ಯೋದ್ಯಮಿ ಬಿ.ಸಿ. ಉಮಾಪತಿ, ಡಾ.ಎಂ.ಜಿ. ಈಶ್ವರಪ್ಪ, ಪ್ರಕಾಶ್ ಪಾಟೀಲ್, ಬಿ.ಜೆ. ರಮೇಶ್, ಬಾಲಚಂದ್ರ, ಶುಭಾ ಐನಳ್ಳಿ, ಯಶೋದಾ, ಸುಷ್ಮಾ ಪಾಟೀಲ್, ಅನುಷಾ, ಪಾರ್ವತಿ, ನಿರ್ಮಲಾ, ರಶ್ಮಿ ಕುಂಕೋದ್ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts