More

    ಮೀಸಲಿಗಾಗಿ ಬೆಂಗಳೂರಲ್ಲಿ ಏಕಾಂಗಿ ಧರಣಿ

    ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಶೇ.7.5 ಮೀಸಲು ಘೋಷಣೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಉದ್ಯಾನದ ಬಳಿ ಅ.21 ರಿಂದ 10 ದಿನಗಳ ಕಾಲ ಅಹೋರಾತ್ರಿ ಏಕಾಂಗಿ ಧರಣಿ ಹಮ್ಮಿಕೊಳ್ಳುತ್ತಿರುವುದಾಗಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಘೋಷಿಸಿದರು.

    ಜಿಲ್ಲಾ ಹಾಗೂ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಸಹಯೋಗದಲ್ಲಿ ನಾಯಕರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೋರಾಟ ಕುರಿತ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.

    ಈ ಧರಣಿಯಲ್ಲಿ ಭಕ್ತರು ಭಾಗಿಯಾಗುವ ಅಗತ್ಯವಿಲ್ಲ. ತಾಲೂಕು, ಜಿಲ್ಲೆ ಮಟ್ಟದಲ್ಲೇ ಅ.21 ರಿಂದ ನಿರಂತರ ಶಾಂತಿಯುತ ಪ್ರತಿಭಟನೆ ನಡೆಸಿ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಇರುವುದರಿಂದ ಅಂದು ರಾಜ್ಯದ ಎಲ್ಲ ಜಿಲ್ಲೆಗಳಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಬೇಕು. ಚುನಾವಣೆ ನೀತಿ ಸಂಹಿತೆಯನ್ನೂ ನಾವು ಲೆಕ್ಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸರ್ಕಾರ ಕಾಟಾಚಾರಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಮಾಡಿದರೆ ಸಾಲದು. ಈ ಸಮಾಜದ ಆಶೋತ್ತರಗಳನ್ನೂ ಈಡೇರಿಸುವತ್ತ ಗಮನ ಹರಿಸಬೇಕು. ನಾವು ಸಂವಿಧಾನಬದ್ಧ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ದೇಶದಲ್ಲಿ ಒಂದೂ ಹೋರಾಟ, ಪ್ರತಿಭಟನೆಯೂ ನಡೆಯದೆ ಒಂದು ವರ್ಗಕ್ಕೆ ಶೇ.10 ರಷ್ಟು ಕೇಂದ್ರ ಸರ್ಕಾರದಿಂದ ಮೀಸಲು ದೊರೆಯುತ್ತದೆ ಎಂದು ಆಕ್ಷೇಪಿಸಿದರು.

    ಸಮಾಜದ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಸ್ವಾಮೀಜಿ ಧರಣಿ ಕೂರಬಾರದು. ಸಮಾಜದ ಜನರು ಇದನ್ನು ಮಾಡುತ್ತಾರೆ. ಶಾಸಕರು ಕೂಡ ಭಾಗವಹಿಸಬೇಕು. ಸದನದ ಒಳಗೂ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.

    ಐಗೂರು ಹನುಮಂತಪ್ಪ, ರಂಗಪ್ಪ ಮತ್ತಿತರ ಮುಖಂಡರು ಮಾತನಾಡಿ, ಮೀಸಲು ವಿಚಾರದಲ್ಲಿ ಶಾಸಕರು ರಾಜೀನಾಮೆ ನೀಡಬೇಕು. ಜನಪ್ರತಿನಿಧಿಗಳು ಸಮಾಜವನ್ನು ಮರೆಯಬಾರದು. ಸಿಎಂ ವಿರುದ್ಧ ಮಾತನಾಡುವ ಗಟ್ಟಿತನ ಪ್ರದರ್ಶಿಸಬೇಕು ಎಂದು ಅನಿಸಿಕೆ ಹಂಚಿಕೊಂಡರು. ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಇತರ ಮುಖಂಡರು ಇದ್ದರು.

    ಸರ್ಕಾರ ಸ್ಪಂದಿಸದಿದ್ರೆ ಉಗ್ರ ಹೋರಾಟ: ವಾಲ್ಮೀಕಿ ಜಯಂತ್ಯುತ್ಸವದೊಳಗೆ ರಾಜ್ಯ ಸರ್ಕಾರ ಮೀಸಲು ಘೋಷಿಸದಿದ್ದಲ್ಲಿ ಹೋರಾಟ ಉಗ್ರ ಸ್ವರೂಪ ತಾಳಲಿದೆ ಎಂದು ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಮಾದರಿಯಲ್ಲೇ ರಾಜ್ಯದಲ್ಲೂ ಪರಿಶಿಷ್ಟ ಪಂಗಡಕ್ಕೆ ಶೇ.7.5ರ ಮೀಸಲು ನೀಡಬೇಕು. ಅಧಿಕಾರಕ್ಕೆ ಬಂದರೆ ಮೀಸಲು ಹೆಚ್ಚಿಸುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಈವರೆಗೆ ಅದನ್ನು ಈಡೇರಿಸಿಲ್ಲ. ಎಸ್‌ಸಿ ಎಸ್‌ಟಿಯಿಂದ ಆಯ್ಕೆಯಾದ ಶಾಸಕರು ನಮ್ಮೊಂದಿಗಿದ್ದಾರೆ. ಅಗತ್ಯ ಬಿದ್ದರೆ ರಾಜೀನಾಮೆಗೂ ಸಿದ್ಧರಾಗಿದ್ದಾರೆ. ಅ.31ರವರೆಗೆ ಕಾದು ನೋಡುತ್ತೇವೆ ಎಂದು ಹೇಳಿದರು.

    ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಮುಗಿದು ಹೋದ ಅಧ್ಯಾಯ. ಈಗ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸುತ್ತೇವೆ. ಸದ್ಯಕ್ಕೆ ರಾಜಕೀಯ ವಿಚಾರಕ್ಕಿಂತಲೂ ಮೀಸಲು ಹೋರಾಟಕ್ಕೆ ಆದ್ಯತೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts