More

    ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ಕಲಿಯಬೇಕು

    ದಾವಣಗೆರೆ : ವಿದ್ಯಾರ್ಥಿಗಳು ಗೊತ್ತಿಲ್ಲದಿರುವುದನ್ನು ಪ್ರಶ್ನಿಸಿ ಉತ್ತರ ಪಡೆಯುವುದನ್ನು ಕಲಿತುಕೊಳ್ಳಬೇಕು. ನಾನೂ ಸಹ ಪ್ರಶ್ನಿಸಿಯೇ ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹಿರಿಯ ಸಾಂಸ್ಕೃತಿಕ ಸಂಘಟಕ ಹಾಗೂ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಹೇಳಿದರು.
     ಗೋಣಿವಾಡದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯ ಹಾಗೂ ಶ್ರೀ ಸೋಮೇಶ್ವರ ಸರ್ ಎಂವಿ ಎಲೈಟ್ ಒಲಂಪಿಯಾಡ್ ಸ್ಕೂಲ್‌ನಲ್ಲಿ ಶುಕ್ರವಾರ ಸಂಜೆ ನಡೆದ ಸೋಮೇಶ್ವರೋತ್ಸವ-2024 ಸಮಾರಂಭ ಉದ್ಘಾಟಿಸಿ ಮಾತನಾಡಿದರು.
     ಯಾವುದೇ ಕ್ಷೇತ್ರವಾದರೂ, ಛಲ, ಬದ್ಧತೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
     ಡಾ. ರಾಜಕುಮಾರ್ ಅವರಿಂದ ಕಂಠೀರವ ಸ್ಟುಡಿಯೋದಲ್ಲಿ ಹಾಡನ್ನು ಹೇಳಿಸಿದ ಕೀರ್ತಿ ನನಗಿದೆ. 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಂಚಾಲಕರಾಗಿ ದಿ. ಶಂಕರ್ ನಾಗ್ ಜತೆಗೆ ಕಾರ್ಯ ನಿರ್ವಹಿಸಿದ ಹೆಮ್ಮೆಯಿದೆ. 70 ಜನ ದಲಿತ ಕಲಾವಿದರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ, 3 ಜನ ದಲಿತ ಕವಿಗಳಿಗೆ ಪದ್ಮಶ್ರೀ ಪ್ರಶಸ್ತಿ ಸಿಗಲು ಶ್ರಮಿಸಿದ ಧನ್ಯತಾ ಭಾವವೂ ಇದೆ ಎಂದು ತಮ್ಮ ಸಾಂಸ್ಕೃತಿಕ ಬದುಕಿನ ಘಟನೆಗಳನ್ನು ಮೆಲುಕು ಹಾಕಿದರು.
     ಸಾನ್ನಿಧ್ಯ ವಹಿಸಿದ್ದ ಕಣ್ವಕುಪ್ಪೆ ಮಠದ ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಭಾರತ ಅನೇಕ ವಿಷಯಗಳಲ್ಲಿ ವಿಶ್ವಕ್ಕೆ ಗುರುವಾಗಿ ಬೆಳೆದಿದೆ. ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಅನುಗ್ರಹಿಸಿದ ಕೀರ್ತಿ ನಾಡಿನ ಹಿರಿಯ ಶರಣರಿಗೆ, ತಪಸ್ವಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.
     ನಾವು ಶ್ರೇಷ್ಠತೆಯ ಹಾಗೂ ಪುಣ್ಯದ ಕೆಲಸಗಳ ಫಲವಾಗಿ ಮನುಷ್ಯರಾಗಿ ಜನಿಸಿದ್ದೇವೆ. ಹಾಗಾಗಿ ಪುಣ್ಯದ ಕೆಲಸಗಳನ್ನು ಮಾಡುತ್ತ ಜೀವನ ಸಾಗಿಸಬೇಕು. ಆಗ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದನ್ನು ಬಗೆಹರಿಸಲು ಭಗವಂತನ ಕಾರುಣ್ಯ ಇರುತ್ತದೆ ಎಂದು ಹೇಳಿದರು.
     ದಾವಣಗೆರೆಯ ವಾಲ್ಮೀಕಿ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ. ವೀರಣ್ಣ-ಲಕ್ಷ್ಮೀದೇವಿ ದಂಪತಿ ಮತ್ತು 25 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕುಕ್ಕವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರ ಸಂಘಕ್ಕೆ ಶ್ರೀ ಸೋಮೇಶ್ವರ ವಿದ್ಯಾಲಯದ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ‘ಸೋಮೇಶ್ವರ ಸಿರಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಘದ ಪರವಾಗಿ ಅಧ್ಯಕ್ಷ ರುದ್ರೇಗೌಡರು ಪ್ರಶಸ್ತಿ ಸ್ವೀಕರಿಸಿದರು.
     ನಿವೃತ್ತ ಸೈನ್ಯಾಧಿಕಾರಿ ಡಾ. ಹಾಲೇಶ್, ಸಾಹಿತಿ ಬಾ.ಮ. ಬಸವರಾಜಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ಕೊಟ್ರೇಶ್, ಸರ್‌ಎಂವಿ ಕಾಲೇಜಿನ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್, ಅಧ್ಯಕ್ಷ ಎಚ್.ಆರ್. ಅಶೋಕ್ ರೆಡ್ಡಿ, ಪ್ರಾಚಾರ್ಯೆ ವೀಣಾ ಸುರೇಶ್ ಇದ್ದರು. ಶ್ರೀ ಸೋಮೇಶ್ವರ ವಿದ್ಯಾಲಯದ ಹರೀಶ್ ಬಾಬು, ಪ್ರಭಾವತಿ, ಮಾಲಾ, ಹೇಮಾ, ಗಾಯತ್ರಿ ಇದ್ದರು.
     ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts