More

    ದೇಶದ ಸಂಸ್ಕೃತಿ ನಾಶ ಮಾಡಲು ಸಾಧ್ಯವಿಲ್ಲ

    ದಾವಣಗೆರೆ : ಈ ದೇಶದ ಉನ್ನತ ಸಂಸ್ಕೃತಿಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.
     ನಗರದ ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಸಮುದಾಯ ಭವನದಲ್ಲಿ ಸೋಮವಾರ, ಶ್ರೀಶೈಲ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 37ನೇ ವಾರ್ಷಿಕ ಪುಣ್ಯಾರಾಧನೆ, ಶ್ರೀಶೈಲ ಜಗದ್ಗುರು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 12ನೇ ವರ್ಷದ ಸ್ಮರಣೋತ್ಸವ, ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದ್ವಾದಶ ಪೀಠಾರೋಹಣ ವರ್ಧಂತಿ ಮಹೋತ್ಸವ ಅಂಗವಾಗಿ ನಡೆದ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
     ವ್ಯಷ್ಟಿಯಾಗಿ ಮತ್ತು ಸಮಷ್ಟಿಯಾಗಿ ಉತ್ತಮ ಸಂಸ್ಕಾರಗಳನ್ನು ನೀಡುವ ಶ್ರೇಷ್ಠ ಪರಂಪರೆ ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದರ ಅರಿವಿಲ್ಲದೆ ಕೆಲವರು ಸನಾತನ ಹಿಂದು ಧರ್ಮದ ಧರ್ಮ, ಸಂಸ್ಕೃತಿ, ಆಚರಣೆ ಮತ್ತು ವಿಚಾರಗಳ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅಗ್ಗದ ಪ್ರಚಾರ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
     ಜನ್ಮದಾರಭ್ಯ ಮರಣ ಪರ್ಯಂತ ವಿಭಿನ್ನ ಹಂತಗಳಲ್ಲಿ ಮನುಷ್ಯನಿಗೆ ನೀಡಲಾಗುವ ಉತ್ತಮ ಸಂಸ್ಕಾರಗಳಿಂದಲೇ ಸಂಸ್ಕೃತಿಯ ಉತ್ಥಾನ ಸಾಧ್ಯ ಎಂದು ನುಡಿದರು.
     ಕಲ್ಲಿಗೆ ಸಂಸ್ಕಾರ ಕೊಟ್ಟರೆ ಸುಂದರವಾದ ಮೂರ್ತಿಯಾಗುತ್ತದೆ. ಅನ್ನಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುತ್ತದೆ. ನೀರಿಗೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುತ್ತದೆ. ಅದರಂತೆ ಮನುಷ್ಯನಿಗೆ ಸಂಸ್ಕಾರ ನೀಡುವುದರಿಂದ ಮನುಷ್ಯನು ಮಹಾದೇವನಾಗುತ್ತಾನೆ ಎಂದು ತಿಳಿಸಿದರು.
     ಸಂಸ್ಕಾರಗಳ ಮೂಲಾಧಾರವೇ ಸದ್ಗುರು. ಗುರುವಿನ ಮಾರ್ಗದರ್ಶನದಿಂದಲೇ ಪ್ರತಿಯೊಬ್ಬರಿಗೂ ಸಂಸ್ಕಾರಗಳು ಪ್ರಾಪ್ತವಾಗುತ್ತವೆ. ಉತ್ತಮ ಸಂಸ್ಕಾರಗಳನ್ನು ನೀಡುವ ಮೂಲಕ ಮನುಕುಲವನ್ನು ಸನ್ಮಾರ್ಗದತ್ತ ಮುನ್ನಡೆಸುವ ವ್ಯಕ್ತಿಯನ್ನೇ ಸದ್ಗುರು ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
     ಪಂಚ ಪೀಠಗಳು ಸನಾತನ ಕಾಲದಿಂದ ಸಮಾಜಕ್ಕೆ ಧರ್ಮ ಮಾರ್ಗದ ಚೌಕಟ್ಟನ್ನು ನೀಡಿ, ಧರ್ಮ ಬೋಧೆ, ದೀಕ್ಷೆ, ಸಂಸ್ಕಾರಗಳನ್ನು ದಯಪಾಲಿಸುತ್ತ ಬಂದಿವೆ ಎಂದು ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts