More

    ಗುರುಗಳ ಪುಣ್ಯಾರಾಧನೆ, ಶಿವಾನುಭವ ಸಂಪದ

    ದಾವಣಗೆರೆ : ಲಿಂ. ಶ್ರೀ ಗುರು ಅನ್ನದಾನ ಮಹಾ ಶಿವಯೋಗಿಗಳ 46ನೇ ಮತ್ತು ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿ ಅವರ ದ್ವಿತೀಯ ವರ್ಷದ ಪುಣ್ಯಾರಾಧನೆ, ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ 261 ಮತ್ತು 262ನೇ ಶಿವಾನುಭವ ಸಂಪದ ಮತ್ತು 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೆ. 10 ರಂದು ಬೆಳಗ್ಗೆ 10 ಗಂಟೆಗೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ನಡೆಯಲಿದೆ.
     ಶ್ರೀ ಅನ್ನದಾನೇಶ್ವರ ಸಾರ್ವಜನಿಕ ಸೇವಾ ನ್ಯಾಸ್ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
     ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಹಿರಿಯ ವಕೀಲ ಮಿರ್ಜಾ ಇಸ್ಮಾಯಿಲ್ ಪಾಲ್ಗೊಳ್ಳುವರು. ಚನ್ನಗಿರಿಯ ಮಹಾಂತೇಶ್ ಶಾಸ್ತ್ರಿ ಹಿರೇಮಠ ಕಲ್ಲೂರು ಉಪನ್ಯಾಸ ನೀಡುವರು ಎಂದು ಹೇಳಿದರು.
     ಇದೇ ವೇಳೆ ಗೌರವ ಶ್ರೀರಕ್ಷೆ ನೀಡಲಾಗುವುದು. ಅಕ್ಕಿ ವರ್ತಕ ಎ.ಬಿ. ಚಂದ್ರಶೇಖರ್ ಅವರಿಗೆ ‘ವಾಣಿಜ್ಯ ಸಿರಿ’, ಇ.ಎಸ್.ಐ ಆಸ್ಪತ್ರೆ ಅಧೀಕ್ಷಕ ಡಾ.ಬಸವನಗೌಡರು (‘ವೈದ್ಯರತ್ನ’), ವಕೀಲ ಎಂ.ವಿ. ರೇವಣಸಿದ್ದಯ್ಯ (‘ಕಾಯಕ ರತ್ನ’), ವೈದ್ಯ ಡಾ.ಮಂಜುನಾಥ್ ದೊಗ್ಗಳ್ಳಿ (‘ಸಮಾಜಸೇವಾ ಚಿಂತಾಮಣಿ’), ವರ್ತಕ ಎಂ.ಎಸ್. ಶರಣಪ್ಪ (‘ಕಾಯಕ ಸೌರಭ’), ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್ (‘ಗಣಕ ಶ್ರೇಷ್ಠ’), ಪತ್ರಕರ್ತ ಮಲ್ಲಿಕಾರ್ಜುನ ಕಬ್ಬೂರ್ (‘ಪತ್ರಿಕೋದ್ಯಮ ಸಿರಿ’), ಟ್ರಸ್ಟ್ ಸದಸ್ಯ ಶಿವಪುತ್ರಪ್ಪ ಹೆರೂರ್ ನಾಗೂರು (‘ಕಾಯಕ ಜೀವಿ’) ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
     ಅಂದು ಬೆಳಗ್ಗೆ ಶ್ರೀ ಅನ್ನದಾನೇಶ್ವರ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದೆ. ಪಂಚಾಕ್ಷರಿ ಸಂಗೀತ ಪಾಠಶಾಲೆಯ ಕಲಾವಿದ ಟಿ.ಎಚ್.ಎಂ. ಶಿವಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವರು ಎಂದು ತಿಳಿಸಿದರು.
     ಮಠದಲ್ಲಿ 25 ವರ್ಷಗಳಿಂದಲೂ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸುತ್ತ ಬರಲಾಗಿದೆ. ಮಠದ ಆವರಣದಲ್ಲಿ ಸಭಾಂಗಣ ಕಟ್ಟಡ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
     ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎನ್. ಅಡಿವೆಪ್ಪ, ಹಿರಿಯ ಪತ್ರಕರ್ತರಾದ ವೀರಪ್ಪ ಎಂ. ಭಾವಿ, ಚಂದ್ರಣ್ಣ, ಕೆ.ಟಿ. ಮಹಾಲಿಂಗೇಶ್, ನಾಗರಾಜ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts