More

    ತಲೆಯ ಮೇಲೆ ಕಲ್ಲು ಹೊತ್ತು ಆಕ್ರೋಶ

    ದಾವಣಗೆರೆ : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
     ಜಯದೇವ ವೃತ್ತದಲ್ಲಿ ತಲೆಯ ಮೇಲೆ ಕಲ್ಲು ಇಟ್ಟುಕೊಂಡು ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
     ರಾಜ್ಯದಲ್ಲಿ ಮುಂಗಾರು ಮಳೆ ವಿಫಲವಾಗಿದ್ದು, ಕಾವೇರಿ ಜಲಾನಯನದ ಜಲಾಶಯಗಳು ಭರ್ತಿಯಾಗದೆ ಸಂಕಷ್ಟ ಎದುರಾಗಿದೆ. ಇಂತಹ ಸಮಯದಲ್ಲಿ ಸರ್ಕಾರ ರಾಜ್ಯದ ರೈತರ ಹಿತ ಕಾಯದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನವಿದೆ ಎಂಬ ಕಾರಣ ಮುಂದಿಟ್ಟುಕೊಂಡು ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಹರಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.
     ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದನ್ನು ಬಿಟ್ಟು ತಮಿಳುನಾಡಿಗೆ ನೀರು ಬಿಡುತ್ತಿದೆ. ಮಳೆ ಕೊರತೆಯಾದ ಈ ವರ್ಷದಲ್ಲಿ ನೆರವಿಗೆ ಬರುವಂತೆ ಹಾಗೂ ಸಂಕಷ್ಟದ ಸೂತ್ರವನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು. ರಾಜ್ಯದ ಎಲ್ಲ ಶಾಸಕರು, ಸಂಸದರು ನಿಯೋಗ ತೆರಳಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಆಗ್ರಹಪಡಿಸಬೇಕಾಗಿತ್ತು ಎಂದು ತಿಳಿಸಿದರು.
     ಇಂತಹ ಸಮಯದಲ್ಲಿ ನಾವು ಭಾರತೀಯ ಒಕ್ಕೂಟದಲ್ಲಿರುವ ರಾಜ್ಯಗಳೆಂದು ತಿಳಿದುಕೊಳ್ಳದೆ ನೀರಿಗಾಗಿ ಒತ್ತಾಯಿಸುತ್ತಿರುವ ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ ಕಿವಿ ಹಿಂಡಿ ಮನವರಿಕೆ ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವುದನ್ನು ಬಿಟ್ಟು ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ನಿತ್ಯ 5000 ಕ್ಯೂಸೆಕ್ ನೀರನ್ನು 10 ದಿನ ಬಿಟ್ಟರೆ ರೈತರ ಬೆಳೆಗೆ ನೀರು ಸಿಗುವುದಿರಲಿ, ಕುಡಿಯಲು ಸಹ ಅಭಾವ ಉಂಟಾಗುವ ಸಾಧ್ಯತೆಗಳಿವೆ ಎಂಬುದನ್ನು ರಾಜ್ಯ ಸರ್ಕಾರ ಮನಗಾಣಬೇಕಾಗಿದೆ ಎಂದು ವೇದಿಕೆಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಅಭಿಪ್ರಾಯಪಟ್ಟರು.
     ಸಂಘಟನೆಯ ದಾವಣಗೆರೆ ಉತ್ತರ ವಲಯದ ಅಧ್ಯಕ್ಷ ಸಿದ್ಧೇಶ್ ಎಸ್, ದಯಾನಂದ ಬಿ.ಇ, ರವಿ ಎಂ., ಅಮ್ಜದ್ ಅಲಿ, ಕೆ.ಎಚ್. ಮೆಹಬೂಬ್, ಗದಿಗೆಪ್ಪ, ಫಾರೂಕ್ ಪಟೇಲಿ, ಶಾಬಾಜ್, ಆಜಮ್ ಅಲಿ, ಬಾಬುರಾವ್, ರಮೇಶ್, ಚಂದ್ರಶೇಖರ ಕೆ. ಗಣಪಾ, ವಿನಯ ಕುಲಕರ್ಣಿ, ನಾಗರಾಜ್ ಕುಲಕರ್ಣಿ, ಹುಲಿಗೆಪ್ಪ, ದರ್ಶನ್ ಎಂ. ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts