More

    ಸುಜ್ಞಾನದ ಬೆಳಕು ನೀಡಿದ ಶರಣರು

    ದಾವಣಗೆರೆ :  ಸಮಾಜದಲ್ಲಿನ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ನೀಡಿದವರು 12ನೇ ಶತಮಾನದ ಶಿವಶರಣರು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು.
     ಶರಣ ಸಾಹಿತ್ಯ ಪರಿಷತ್ ನಗರ ಘಟಕ, ಎವಿಕೆ ಪದವಿಪೂರ್ವ ಕಾಲೇಜು, ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ವಿಷಯ ಕುರಿತು ಮಾತನಾಡಿದರು.
     ಅಂತರಂಗದ ಅರಿವುಳ್ಳವರಾಗಿದ್ದ ಶಿವಶರಣರು ಅನುಭಾವದಿಂದ ವಚನಗಳನ್ನು ಕಟ್ಟಿಕೊಡುವ ಮೂಲಕ ಸಮಾಜದಲ್ಲಿ ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಿದರು. ಆದರೆ, ಜನರಲ್ಲಿ ಇಂದು ಅಕ್ಷರದ ಅರಿವಿದ್ದರೂ ಅಂತರಂಗದ ಜ್ಯೋತಿ ಬತ್ತಿಹೋಗಿದೆ ಎಂದರು.
     ಜಾತಿ, ಮತ, ವರ್ಣ, ಲಿಂಗಭೇದ ಎಲ್ಲವನ್ನೂ ಧಿಕ್ಕರಿಸಿ ಸರ್ವರಿಗೂ ಲೇಸನ್ನೇ ಬಯಸಿದ ಶ್ರೇಷ್ಟ ಸಂಸ್ಕೃತಿ ಶರಣ ಸಂಸ್ಕೃತಿ. ಇದು ಅರಿವು, ಆಚಾರ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯ ಕಲಿಸುತ್ತದೆ. ಸತ್ಯ ಶುದ್ಧ ಕಾಯಕದ ಮೂಲಕ ಸಮಾಜಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕೆಂಬುದೆ ಎಲ್ಲ ಶರಣರ ಪ್ರಮುಖ ಆಶಯ ಎಂದರು.
     ಶರಣರ ಒಂದೊಂದು ವಚನಗಳು ಬದುಕನ್ನು ಕಟ್ಟಿಕೊಡುತ್ತವೆ. ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಎಲ್ಲ ಮನೆಗಳು ನಂದಗೋಕುಲ ಆಗುತ್ತವೆ. ಜತೆಗೆ ಸಮಾಜದ ಪ್ರಗತಿಯೂ ಆಗಲಿದೆ. ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರ ಹಾಗೂ ಮೌಲ್ಯ ಕಲಿಸುವ ಅಗತ್ಯವಿದೆ ಎಂದು ತಿಳಿಸಿದರು.
     ದತ್ತಿ ದಾನಿ ಶಂಕರ್ ಅಕ್ಕಿಹಾಳ್ ಮಾತನಾಡಿ, ವಚನಗಳ ಅಧ್ಯಯನದಿಂದ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬಹುದು. ಅವುಗಳ ಪಾಲನೆಯಿಂದ ಅತ್ಯಂತ ನೆಮ್ಮದಿ ಲಭಿಸುತ್ತದೆ. ದುಶ್ಚಟಗಳಿಗೆ ಒಳಗಾಗದೆ ವಿಚಾರಶೀಲತೆಯಿಂದ ಬದುಕು ನಡೆಸಬೇಕು ಎಂದು ಹೇಳಿದರು.
     ಎವಿಕೆ ಪದವಿಪೂರ್ವ ಕಾಲೇಜು ಪ್ರಾಚಾರ್ಯ ರಮೇಶ್ ದೂಪದಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಅಧ್ಯಕ್ಷತೆ ವಹಿಸಿದ್ದರು. ಎವಿಕೆ ಕಾಲೇಜು ಉಪನ್ಯಾಸಕಿ ಡಾ. ಗೀತಾ ಬಸವರಾಜ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ನಗರ ಘಟಕ ಗೌರವಾಧ್ಯಕ್ಷ ಎಂ.ಎಸ್. ನಾಗರಾಜಪ್ಪ, ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಗಾಯತ್ರಿ ವಸ್ತ್ರದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts