More

    ಪರ್ಯಾಯ ಜಾತಿಗಣತಿಗೆ ಮಹಾಸಭಾ ಸಿದ್ಧತೆ

    ದಾವಣಗೆರೆ : ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಗಣತಿ ವರದಿಯ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಪರ್ಯಾಯ ಜಾತಿಗಣತಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
     ಈ ಪ್ರಕ್ರಿಯೆ ವೈಜ್ಞಾನಿಕವಾಗಿರಲಿ ಎನ್ನುವ ಕಾರಣಕ್ಕೆ ವಿಶೇಷ ಸಾಫ್ಟ್‌ವೇರ್ ಬಳಸಿಕೊಳ್ಳಲು ಮಹಾಸಭಾ ತಯಾರಿ ನಡೆಸಿದೆ. ಇದರಿಂದ ಜಾತಿ ಗಣತಿಯಲ್ಲಿ ನಿಖರತೆ ಇರಲಿದೆ. ಅಂಕಿ ಅಂಶಗಳ ವಾಸ್ತವ ಚಿತ್ರಣ ದೊರೆಯಲಿದೆ ಎನ್ನುತ್ತವೆ ಮೂಲಗಳು.
     ಸಮಾಜದ ಜನಸಂಖ್ಯೆ ಎಷ್ಟಿದೆ ಎಂಬುದನ್ನು ಆನ್‌ಲೈನ್ ಮೂಲಕ ಗಣತಿ ಮಾಡುವಂತೆ ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಗರದಲ್ಲಿ ಇತ್ತೀಚೆಗೆ ನಡೆದ ಮಹಾಸಭಾದ ಮಹಾ ಅಧಿವೇಶನದಲ್ಲಿ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
     ಪರ್ಯಾಯ ಜಾತಿಗಣತಿ ನಡೆಸುವ ಸುಳಿವನ್ನು ಮಹಾಸಭಾ ಅಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರೂ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಹಣ, ಸಿಬ್ಬಂದಿ ಎಲ್ಲವೂ ಇದೆ. ಯಾವಾಗ ಮಾಡಿಸುತ್ತೇವೆ ಎಂದು ಬರೆದುಕೊಡಲು ಆಗುವುದಿಲ್ಲ ಎಂದು ತಿಳಿಸಿದರು.
     ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿವಾರು ಜನಗಣತಿ ವರದಿಯನ್ನು ಸ್ವೀಕಾರ ಮಾಡಿದ್ದಾರೆ ಅಷ್ಟೇ. ಅದನ್ನು ಸದನದಲ್ಲಿ ಪಾಸ್ ಮಾಡಿಲ್ಲ. ಸ್ವೀಕಾರ ಮಾಡಲಿ ಬಿಡಿ ತಪ್ಪೇನಿದೆ. ವರದಿಗೆ ನಮ್ಮ ವಿರೋಧವಂತೂ ಇದ್ದೇ ಇದೆ. ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
     …
     (((ಬಾಕ್ಸ್)))
     ಹೋರಾಟಕ್ಕೆ ಇನ್ನಷ್ಟು ಬಲ
     ಜಾತಿಗಣತಿ ವಿರುದ್ಧದ ಜಂಟಿ ಸಮರದಲ್ಲಿ ವೀರಶೈವ ಲಿಂಗಾಯತರು, ಹಾಗೂ ಒಕ್ಕಲಿಗರ ಜತೆಗೆ ಬ್ರಾಹ್ಮಣ ಸಮುದಾಯವೂ ಕೈಜೋಡಿಸಿದೆ.
     ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಒಕ್ಕಲಿಗರು, ಬ್ರಾಹ್ಮಣರು ಲಿಂಗಾಯತರು ಸೇರಿ ಹೋರಾಟ ಮಾಡುತ್ತೇವೆ ಎನ್ನುವ ಮೂಲಕ ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳಿಸುವ ಸೂಚನೆ ನೀಡಿದರು.
     ಹತ್ತು ವರ್ಷಗಳ ಹಿಂದಿನ, ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿಯನ್ನು ಮುಖ್ಯಮಂತ್ರಿಗೆ ನೀಡಲಾಗಿದೆ. ಕಾಂತರಾಜು ಅವರು ವರದಿ ಬರೆದಿದ್ದಾರೋ ಅಥವಾ ಕೆ. ಜಯಪ್ರಕಾಶ್ ಹೆಗ್ಡೆ ತಯಾರಿಸಿದ್ದಾರೋ ಗೊತ್ತಿಲ್ಲ. ಲಿಂಗಾಯತರು 2 ಕೋಟಿಯಷ್ಟು ಇದ್ದೇವೆ. ಆದರೆ ವರದಿಯಲ್ಲಿ ಕಡಿಮೆ ತೋರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
     ಮಹಾಸಭಾದ ಈ ನಿಲುವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ವಾಗತಿಸಿದೆ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ನಮ್ಮ ಬೆಂಬಲವಿದೆ. ಅವರೊಂದಿಗೆ ಹೋರಾಟಕ್ಕೆ ಕೈ ಜೋಡಿಸಲು ಸಿದ್ಧವೆಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದ್ದಾರೆ.
     …
     (ಕೋಟ್)
     ಜಾತಿಗಣತಿ ವರದಿ ವಿರೋಧಿಸಿ ಮೂರು ತಿಂಗಳ ಹಿಂದೆಯೇ ಸರ್ಕಾರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಮನವಿ ಸಲ್ಲಿಸಲಾಗಿತ್ತು. ಆದರೂ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇದನ್ನು ವಿರೋಧಿಸಿ ಹೋರಾಟಕ್ಕೆ ರೂಪುರೇಷೆ ತಯಾರಿಸಲಾಗುವುದು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ನಮ್ಮ ಬೆಂಬಲವಿದೆ. ಅವರೊಂದಿಗೆ ಹೋರಾಟಕ್ಕೆ ಕೈ ಜೋಡಿಸಲು ಸಿದ್ಧ.
     ಅಶೋಕ ಹಾರನಹಳ್ಳಿ, ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
     …
     
     (ಕೋಟ್)
     ಜಾತಿ ಗಣತಿ ವರದಿ ಸೋರಿಕೆಯಾಗಿದೆ. ಸಚಿವ ಜಮೀರ್ ಅಹಮದ್ ನೀಡಿರುವ ಹೇಳಿಕೆಯಿಂದ ಇದು ವೇದ್ಯವಾಗುತ್ತದೆ. ಸೋರಿಕೆಯಾದ ವರದಿ ಬಿಡುಗಡೆ ಮಾಡಿದರೆ ಅದರ ಪಾವಿತ್ರೃತೆ ಉಳಿಯದು. ಜಾತಿ ಗಣತಿ ವರದಿ ಬಿಡುಗಡೆ ಆಗುವ ಮುನ್ನವೇ ಎಸ್ಸಿ ಸಮುದಾಯ ಹೆಚ್ಚಿದೆ. 70 ಲಕ್ಷ ಮುಸ್ಲಿಮರಿದ್ದಾರೆ ಎಂದು ಸಚಿವರು  ಹೇಳಿದ್ದಾರೆ. ಇದರರ್ಥ ಗಣತಿಯ ವಿವರಗಳು ಸೋರಿಕೆಯಾಗಿವೆ ಎಂದಲ್ಲವೆ ?
       ರೇಣುಕ ಪ್ರಸನ್ನ
      ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ
     …
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts