More

    ಪ್ರಶ್ನಿಸುವ ಮನೋಭಾವದಿಂದ ಜ್ಞಾನ ವೃದ್ಧಿ

    ದಾವಣಗೆರೆ : ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು ಎಂದು ಇಸ್ರೋ ವಿಜ್ಞಾನಿ ಶಿವಕುಮಾರ್ ಎಸ್. ಪಾಟೀಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
     ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮಾತನಾಡಿ, ಒಳ ಜಗತ್ತನ್ನು ಪ್ರಶ್ನಿಸಿದಾಗ ಅಧ್ಯಾತ್ಮ ಜೀವಿಯಾಗುತ್ತಾನೆ, ಹೊರ ಜಗತ್ತನ್ನು ಪ್ರಶ್ನಿಸಿದಾಗ ವಿಜ್ಞಾನಿ ಜನ್ಮ ತಾಳುತ್ತಾನೆ ಎಂದು ಹೇಳಿದರು.
     ವಿಷಯಗಳನ್ನು ಏಕೆ, ಹೇಗೆ, ಏನು ಎಂದು ಕುತೂಹಲದಿಂದ ತಿಳಿಯಬೇಕು. ಕಲಿಯಬೇಕು ಎಂಬ ಹಸಿವಿರಬೇಕು. ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
     ಶಿಕ್ಷಣ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದರೆ ದೇಶ ಪ್ರಗತಿ ಸಾಧಿಸುತ್ತದೆ. ತಂತ್ರಜ್ಞಾನದ ಪ್ರಗತಿಯಿಂದಾಗಿ ಎಲ್ಲ ಮಾಹಿತಿಯೂ ಬೆರಳ ತುದಿಯಲ್ಲಿ ದೊರೆಯುತ್ತಿದೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
     ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಶ್ರಮರಹಿತವಾದ ಶಿಕ್ಷಣವನ್ನು ಪಡೆಯಬೇಕು. ವಿಷಯಗಳನ್ನು ತಲಸ್ಪರ್ಶಿಯಾಗಿ ಅರ್ಥ ಮಾಡಿಕೊಳ್ಳಬೇಕು. ತಲೆ, ಹೃದಯ ಮತ್ತು ಕೈಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
     ವಿದ್ಯಾರ್ಥಿಗಳು ತಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಬೇಕು. ಶಿಸ್ತು, ಶ್ರದ್ಧೆ ಮತ್ತು ಶ್ರಮ ಮಂತ್ರವಾಗಬೇಕು. ಮನಸ್ಸು ಹಿಡಿತದಲ್ಲಿರಬೇಕು ಎಂದರು. ವಿಜ್ಞಾನಕ್ಕೆ ವಿವೇಕ ಇರಬೇಕು. ದುರ್ಲಾಭ ಪಡೆಯಬಾರದು ಎಂದು ಹೇಳಿದರು.
     ಬಾಪೂಜಿ ವಿದ್ಯಾ ಸಂಸ್ಥೆಯ ಖಜಾಂಚಿ ಎ.ಎಸ್. ನಿರಂಜನ್ ಮಾತನಾಡಿ, ಕೃತಕ ಬುದ್ಧಿಮತ್ತೆಯನ್ನು ಅಗತ್ಯ ಇರುವಷ್ಟು ಮಾತ್ರ ಬಳಸಬೇಕು. ಎಲ್ಲ ಕ್ಷೇತ್ರಗಳಿಗೆ ಆವರಿಸಿದರೆ ಆತಂಕ ಸೃಷ್ಟಿಯಾಗುತ್ತದೆ. ಉದ್ಯೋಗ ವಂಚಿತರನ್ನಾಗಿ ಮಾಡುವ ಅಪಾಯವಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸಿ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
     ಎಲ್ಲ ಕ್ಷೇತ್ರಗಳಲ್ಲೂ ವಿಜ್ಞಾನಕ್ಕೆ ಮಹತ್ವವಿದೆ. ಚಂದ್ರಯಾನ-3 ಯೋಜನೆಯಲ್ಲಿ ಯಶಸ್ವಿಯಾಗುವ ಮೂಲಕ ಯಾವ ದೇಶವೂ ಮಾಡದ ಕೆಲಸವನ್ನು ಭಾರತ ಮಾಡಿದೆ. ನಮ್ಮ ವಿಜ್ಞಾನಿಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು. ವಿಜ್ಞಾನ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಹೆಚ್ಚಾಗಬೇಕು ಎಂದು ಹೇಳಿದರು.
     ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಪಿ. ರುದ್ರಪ್ಪ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಟಿ.ಎಂ. ಶರಣಪ್ಪ ಇದ್ದರು. ಉಪನ್ಯಾಸಕರಾದ ಉಮೇಶ ಸ್ವಾಗತಿಸಿದರು. ಬಿ.ಎಂ. ಶಿವಕುಮಾರ್ ವಂದಿಸಿದರು.
     …
     
     ಇಸ್ರೋ ಸಾಧನೆ ಅನನ್ಯ
     ‘ಸೂರ್ಯ, ಚಂದ್ರರ ಕಡೆಗೆ ಭಾರತೀಯರ ಪ್ರಯಾಣ’ ಕುರಿತು ವಿಜ್ಞಾನಿ ಶಿವಕುಮಾರ್ ಎಸ್. ಪಾಟೀಲ್ ಮಾತನಾಡಿ, ಇಸ್ರೋ ಸಂಸ್ಥೆಯು 1962 ರಲ್ಲಿ ಆರಂಭವಾಯಿತು. ಡಾ. ವಿಕ್ರಂ ಸಾರಾಭಾಯ್ ಇಸ್ರೋದ ಪಿತಾಮಹ. ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಸಂಸ್ಥೆಯು ಮಾಡಿರುವ ಸಾಧನೆ ಅನನ್ಯ ಎಂದು ಹೇಳಿದರು.
     ಉಪಗ್ರಹ ಮತ್ತು ಉಡಾವಣೆಗೆ ಬೇಕಾದ ರಾಕೆಟ್ ತಂತ್ರಜ್ಞಾನ, ಎಸ್‌ಎಸ್‌ಎಲ್‌ವಿ, ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿ ಉಡಾವಣಾ ನೌಕೆಗಳ ಕುರಿತು ಮಾಹಿತಿ ನೀಡಿದರು. ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಇಸ್ರೋದಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ವಿವರಿಸಿದರು.
     ಭೂಮಿಯಿಂದ ಮೇಲೆ 100 ಕಿ.ಮೀ. ಎತ್ತರದಲ್ಲಿ ನಿರ್ವಾತ ಪ್ರದೇಶವಿದೆ. ಉಪಗ್ರಹಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿರುತ್ತದೆ. ಅದರ ನಿಯಂತ್ರಣವನ್ನು ಸಂಸ್ಥೆಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts