More

    ಕುತೂಹಲ ಮೂಡಿಸಿರುವ ರೇಣುಕಾಚಾರ್ಯ ನಡೆ

    ದಾವಣಗೆರೆ : ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಇತ್ತೀಚಿನ ನಡೆ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿದ್ದು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕುತೂಹಲ ಮೂಡಿಸಿದೆ.
     ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಜಗಳೂರಿನ ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಅವರ ದಾವಣಗೆರೆ ನಿವಾಸಕ್ಕೆ ಭಾನುವಾರ ತೆರಳಿ ಮಾತುಕತೆ ನಡೆಸಿದ್ದ ರೇಣುಕಾಚಾರ್ಯ, ಮರುದಿನವೇ ಚನ್ನಗಿರಿಯ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.
     ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ರೇಣುಕಾಚಾರ್ಯ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ತಾವೊಬ್ಬ ಪ್ರಬಲ ಆಕಾಂಕ್ಷಿ ಎಂದೂ ಹೇಳಿಕೊಂಡಿದ್ದಾರೆ. ಈಗ ಪಕ್ಷದ ಟಿಕೆಟ್ ವಂಚಿತರು, ಅಸಮಾಧಾನಿತರನ್ನು ಭೇಟಿ ಮಾಡುವ ಮೂಲಕ ರೇಣುಕಾಚಾರ್ಯ ಪಕ್ಷದಲ್ಲೇ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.
     ಮಾಜಿ ಶಾಸಕ ಗುರುಸಿದ್ದನಗೌಡ ಮತ್ತು ಅವರ ಮೂವರು ಪುತ್ರರನ್ನು ನೋಟಿಸ್ ನೀಡದೆ ಉಚ್ಚಾಟನೆ ಮಾಡಲಾಗಿದೆ ಎಂದು ಭಾನುವಾರ ವಾಗ್ದಾಳಿ ನಡೆಸಿದ್ದ ರೇಣುಕಾಚಾರ್ಯ, ಸೋಮವಾರ ಗುರುಸಿದ್ದನಗೌಡರ ಜತೆಗೆ ಚನ್ನಗಿರಿ ತಾಲೂಕು ಮಾಡಾಳು ಗ್ರಾಮದಲ್ಲಿ ವಿರೂಪಾಕ್ಷಪ್ಪ ಅವರ ಮನೆಗೆ ಭೇಟಿ ನೀಡುವ ಮೂಲಕ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.
     ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ರೇಣುಕಾಚಾರ್ಯ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬೇಕಾದ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತಿರುವಂತಿದೆ. ಮಾಜಿ ಶಾಸಕರುಗಳನ್ನು ಭೇಟಿಯಾಗುವ ಮೂಲಕ ಕ್ಷೇತ್ರದಲ್ಲಿ ತಮ್ಮದೇ ಆದ ತಂಡವೊಂದನ್ನು ಕಟ್ಟಿಕೊಳ್ಳುತ್ತಿದ್ದಾರೆಯೆ ಎನ್ನುವ ಪ್ರಶ್ನೆ ಮೂಡುತ್ತದೆ. ಇದು ಅವರ ರಾಜಕೀಯ ತಂತ್ರಗಾರಿಕೆಯ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ.
     ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ರೇಣುಕಾಚಾರ್ಯ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಚರ್ಚೆಗೆ ಗುರಿಯಾಗಿತ್ತು. ತಾವು ಕಾಂಗ್ರೆಸ್‌ಗೆ ಹೋಗುವುದಾಗಿ ಹೇಳಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.
     …
     (ಕೋಟ್)
     ಮಾಡಾಳು ವಿರೂಪಾಕ್ಷಪ್ಪ ನನ್ನ ಸ್ನೇಹಿತರು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು. ಅವರಿಗೆ ನೋವಾಗಿತ್ತು, ಕುಟುಂಬದ ಜತೆಗೆ ನಾವಿದ್ದೇವೆ ಎಂದು ಧೈರ್ಯ ಹೇಳಿ ಬಂದಿದ್ದೇವೆ. ಇದೊಂದು ಸೌಜನ್ಯದ ಭೇಟಿ.
      ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts