More

    ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆ ಕಾಪಾಡಲು ಆಗ್ರಹ

    ದಾವಣಗೆರೆ : ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆಯನ್ನು ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಚಾರ್ಯರು, ಉಪನ್ಯಾಸಕರು, ಹಾಗೂ ಬೋಧಕೇತರ ನೌಕರರ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
     ಜಿಲ್ಲಾಡಳಿತ ಭವನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ನಂತರ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
     ಪದವಿಪೂರ್ವ ಶಿಕ್ಷಣ ಇಲಾಖೆಯು, ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಹಂತಗಳ ನಡುವೆ ಸೇತುವಾಗಿ ಗುಣಾತ್ಮಕ ಹಾಗೂ ಸ್ಪರ್ಧಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ರಾಷ್ಟ್ರದಲ್ಲಿಯೇ ಮಾದರಿಯಾದ ಶೈಕ್ಷಣಿಕ ವ್ಯವಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಹೇಳಿದರು.
     ನಮ್ಮ ಸಿ.ಇ.ಟಿ.ಗಳಲ್ಲಿ ಯಶಸ್ಸು ಸಾಧಿಸಿದವರು ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತನ್ನದೇ ಆದ ಶೈಕ್ಷಣಿಕ ಮೌಲ್ಯ ಮತ್ತು ಅಸ್ಮಿತೆಯನ್ನು ಹೊಂದಿರುವ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಹಂತ ಹಂತವಾಗಿ ಕೊಲ್ಲುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
     ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಎಂದು ಹೆಸರು ಬದಲಿಸಲಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿ.ಯು. ಹಂತವನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ಕೂಡಲೇ ಕೈಬಿಟ್ಟು ಪದವಿಪೂರ್ವ ಶಿಕ್ಷಣ ಇಲಾಖೆ ಎಂಬ ಹೆಸರನ್ನೇ ಯಥಾಸ್ಥಿತಿಯಲ್ಲಿ ಇರಿಸಬೇಕು ಎಂದು ಆಗ್ರಹಿಸಿದರು.
     ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವ ಪರೀಕ್ಷಾ ವಿಭಾಗವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸುವ ಮೂಲಕ ಶೈಕ್ಷಣಿಕ ವಿಭಾಗ ಮತ್ತು ಪರೀಕ್ಷಾ ವಿಭಾಗಗಳ ನಡುವೆ ಹಳಿ ತಪ್ಪಿರುವ ಸಮನ್ವಯವನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
     ಪ್ರತಿ ಜಿಲ್ಲಾ ಹಂತಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿ ನಡೆಸುವ ಸಂಬಂಧ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ವಹಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಹೇಳಿದರು.
     ಸರ್ಕಾರವು ಯಾವುದೇ ಶಿಕ್ಷಕ, ಶಿಕ್ಷಕೇತರ ಸಂಘಟನೆ, ಶಿಕ್ಷಣ ತಜ್ಞರ ಜತೆಗೆ ಸಾಧಕ-ಬಾಧಕಗಳನ್ನು ಕುರಿತು ಚರ್ಚೆ ನಡೆಸದೇ ಏಕಾಏಕಿ ಪಿಯು ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕ ನಿರ್ಧಾರವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಕುಸಿಯುವುದು ಮಾತ್ರವಲ್ಲ, ಓದಿನ ಬಗ್ಗೆ ತಾತ್ಸಾರವನ್ನು ಬೆಳೆಸುತ್ತದೆ ಎಂದರು.
     ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಡಿ. 1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಎಚ್ಚರಿಕೆ ನೀಡಿದರು.
     ಸಂಘಟನೆಯ ಮುಖಂಡರಾದ ಎಸ್. ಪ್ರದೀಪ್ ಕುಮಾರ್, ಸಿ.ಬಿ. ರವಿ. ಬಿ. ಪಾಲಾಕ್ಷಿ, ರಿಜ್ವಾನ್ ಬಾಷಾ, ಅನ್ನಪೂರ್ಣಾ ಪಾಟೀಲ್, ಬಿ.ಆರ್. ಮಂಜುಳಾ, ವಾಣಿಶ್ರೀ, ಅನಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts