More

    ಕೇಸರಿ ಸಾಗರದಲ್ಲಿ ಗೌರಿನಂದನನ ಶೋಭಾಯಾತ್ರೆ; ಅಬ್ಬರಿಸಿದ ಡಿಜೆಗಳು ಮೈ ಮರೆತು ಕುಣಿದ ಯುವಜನ

    ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

    ಕೇಸರಿ ಸಾಗರದಲ್ಲಿ ಗೌರಿನಂದನನ ಶೋಭಾಯಾತ್ರೆ; ಅಬ್ಬರಿಸಿದ ಡಿಜೆಗಳು ಮೈ ಮರೆತು ಕುಣಿದ ಯುವಜನ

    ಶೋಭಾಯಾತ್ರೆಗೆ ಶಾಸಕ ಎಸ್.ಎ.ರವೀಂದ್ರನಾಥ್ ಚಾಲನೆ ನೀಡಿದರು. ಹೈಸ್ಕೂಲ್ ಮೈದಾನದಿಂದ ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ, ಪಿಬಿ ರಸ್ತೆ ಮಾರ್ಗವಾಗಿ ಶೋಭಾಯಾತ್ರೆ ಸಂಜೆ ಬಾತಿ ಕೆರೆ ಸಮೀಪ ತಲುಪಿತು. ಅಲ್ಲಿ ನಿರ್ಮಿಸಿದ್ದ ಕೃತಕ ಕೆರೆಯಲ್ಲಿ ವಿನಾಯಕನ ವಿಸರ್ಜನೆ ನಡೆಯಿತು.

    ಮೆರವಣಿಗೆಯುದ್ದಕ್ಕೂ ಎಲ್ಲೆಲ್ಲೂ ಕೇಸರಿಯದೇ ರಂಗು. ಧ್ವಜಗಳು, ಪೇಟಾ, ಹೆಗಲ ಮೇಲೆ ಹಾಕಿದ್ದ ವಸ್ತ್ರ ಎಲ್ಲವೂ ಕೇಸರಿಮಯ. ಮಕ್ಕಳು, ಯುವಕ ಯುವತಿಯರು, ಹಿರಿಯರು ಹೀಗೆ ಎಲ್ಲ ವಯೋಮಾನದವರೂ ಸಂಭ್ರಮದಿಂದ ಭಾಗಿಯಾದರು.

    ಚಂಡೆ ವಾದ್ಯ ಸೇರಿ ವಿವಿಧ ಕಲಾ ತಂಡಗಳು ಸಂಪ್ರದಾಯವನ್ನು ಸಾರಿದರೆ, ಡಿಜೆಗಳ ಮೂಲಕ ಹೊರ ಹೊಮ್ಮುತ್ತಿದ್ದ ಭಕ್ತಿ ಗೀತೆಗಳು ಹಾಗೂ ಸಿನಿಮಾ ಹಾಡುಗಳು ಯುವಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಬೆಳಗಾವಿಯಿಂದ ತರಿಸಿದ್ದ ಎಲ್‌ಇಡಿ ಪರದೆ, ಅಲಂಕಾರಿಕ ದೀಪಗಳನ್ನು ಅಳವಡಿಸಿದ್ದ ಡಿಜೆ ಗಮನ ಸೆಳೆಯಿತು. ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಸೇರಿ ಯುವತಿಯರ ಸಮೂಹ ಡಿಜೆ ಹಾಡುಗಳ ಸದ್ದಿಗೆ ಹೆಜ್ಜೆ ಹಾಕಿತು.

    ಶೋಭಾಯಾತ್ರೆ ಸಂಭ್ರಮವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಯಿತು. ಭಕ್ತರು ಗಣಪತಿ ಮೂರ್ತಿ ಮುಂದೆ ನಿಂತು ಸೆಲ್ಫಿ ಪಡೆದುಕೊಂಡರು. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತಿದ್ದ ಜನರು ಶೋಭಾಯಾತ್ರೆ ವೈಭವವನ್ನು ಕಣ್ತುಂಬಿಕೊಂಡರು. ಬೆಸ್ಕಾಂ ಸಿಬ್ಬಂದಿ ಹಾಜರಿದ್ದು ಮೆರವಣಿಗೆ ಸುಗಮವಾಗಿ ಸಾಗಲು ಅಗತ್ಯ ನಿರ್ವಹಣೆ ಮಾಡಿದರು.

    ಜನಜಂಗುಳಿ ನಡುವೆ ಹಲವರ ಮೊಬೈಲ್‌ಗಳು ಕಳವಾದವು. ‘ನಿಮ್ಮ ಮೊಬೈಲ್ ಫೋನ್‌ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ’ ಎಂದು ಸಂಘಟಕರು ಧ್ವನಿವರ್ಧಕದ ಮೂಲಕ ಎಚ್ಚರಿಸುತ್ತಲೇ ಇದ್ದರು.

    ಹಿಂದು ಮಹಾಗಣಪತಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ನೇತೃತ್ವ ವಹಿಸಿದ್ದರು. ಶೋಭಾಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್‌ಗಳಾದ ಬಿ.ಜಿ.ಅಜಯಕುಮಾರ್, ಎಸ್.ಟಿ. ವೀರೇಶ್, ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಶ್ಯಾಮ್, ಲೋಕಿಕೆರೆ ನಾಗರಾಜ, ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಮಾಜಿ ಸದಸ್ಯ ಕುಮಾರ್ ಇದ್ದರು.

    ಅಪ್ಪು ಭಾವಚಿತ್ರ: ಅಭಿಮಾನಿಗಳು ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಗಳನ್ನು ಹಿಡಿದು ಬಂದಿದ್ದರು. ಕಿಚ್ಚ ಸುದೀಪ್ ಇನ್ನಿತರ ಸಿನಿಮಾ ಹೀರೋಗಳ ಭಾವಚಿತ್ರವಿರುವ ಧ್ವಜಗಳು ಕಂಡುಬಂದವು. ಕ್ರೇನ್ ಮೇಲೇರಿದ್ದ ಕೆಲ ಯುವಕರು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಅಪ್ಪು ಭಾವಚಿತ್ರವಿರುವ ದೊಡ್ಡ ಫ್ಲೆಕ್ಸ್ ಪ್ರದರ್ಶಿಸಿದರು.

    ಪ್ರಸಾದ, ಮಜ್ಜಿಗೆ ವಿತರಣೆ: ಶೋಭಾಯಾತ್ರೆ ಸಾಗಿದ ಮಾರ್ಗದಲ್ಲಿ ಹಲವು ದಾನಿಗಳು ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಚೇತನಾ ಹೋಟೆಲ್ ಬಳಿ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ , ಗಾಂಧಿ ವೃತ್ತ ಮುಂತಾದ ಕಡೆಗಳಲ್ಲಿ ಪ್ರಸಾದ ವಿತರಿಸಲಾಯಿತು. ಮತ್ತೆ ಕೆಲವರು ಉಚಿತವಾಗಿ ಮಜ್ಜಿಗೆ ಪಾಕೆಟ್‌ಗಳನ್ನು ನೀಡಿದರು. ಕುಡಿಯುವ ನೀರು, ತಂಪು ಪಾನೀಯದ ವ್ಯವಸ್ಥೆಯೂ ಇತ್ತು.

    ಜಾತ್ರೆಯ ಕಳೆ: ಹೈಸ್ಕೂಲ್ ಮೈದಾನದಲ್ಲಿ ಐಸ್‌ಕ್ರೀಂ, ಕಬ್ಬಿನ ಹಾಲು, ಬಲೂನು, ಚೆಂಡುಗಳು, ಕೊಳಲು ಇನ್ನಿತರ ವಸ್ತುಗಳ ಮಾರಾಟ ಜೋರಾಗಿತ್ತು. ಜಾತ್ರೆಯಂತೆ ಕಂಗೊಳಿಸಿತು. ಜತೆಗೆ ಮಜ್ಜಿಗೆ, ಕುಡಿಯುವ ನೀರಿನ ಬಾಟಲಿಗಳು ಮಾರಾಟವಾದವು.

    ಗಣಪನಿಗೆ ಪುಷ್ಪವೃಷ್ಟಿ
    ಶೋಭಾಯಾತ್ರೆ ಜಯದೇವ ವೃತ್ತಕ್ಕೆ ಬರುತ್ತಿದ್ದಂತೆ ಹಿಂದು ಮಹಾಗಣಪತಿ ಮೂರ್ತಿಯ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.
    ಕ್ರೇನ್ ಬಳಸಿ ಮೇಲಿನಿಂದ ಹೂವಿನ ಮಳೆಗರೆದ ದೃಶ್ಯ ಮನಮೋಹಕವಾಗಿತ್ತು. ಈ ಸಂದರ್ಭವನ್ನು ಕಣ್ತುಂಬಿಕೊಂಡ ಭಕ್ತರು ಹರ್ಷೋದ್ಗಾರ ಮಾಡಿದರು.
    ಟಿಕೆಟ್ ಆಕಾಂಕ್ಷಿಗಳ ಕಲರವ
    ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಹೈಸ್ಕೂಲ್ ಮೈದಾನದಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ವೇಳೆ ಬಿಜೆಪಿಯ ಹಲವು ಮುಖಂಡರು ಕಾಣಿಸಿಕೊಂಡರು. ಅಷ್ಟೇ ಅಲ್ಲ, ಅವರ ಅಭಿಮಾನಿಗಳು ತಮ್ಮ ನಾಯಕನ (ಟಿಕೆಟ್ ಆಕಾಂಕ್ಷಿ) ಭಾವಚಿತ್ರವಿರುವ ಧ್ವಜ ಹಿಡಿದು ಬಂದಿದ್ದರು.

    ಪೊಲೀಸರ ಸರ್ಪಗಾವಲು
    ಶೋಭಾಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಪೊಲೀಸರ ಸರ್ಪಗಾವಲಿತ್ತು. 700ಕ್ಕೂ ಹೆಚ್ಚು ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಭದ್ರತಾ ವ್ಯವಸ್ಥೆ ನೋಡಿಕೊಂಡರು. ಹಿರಿಯ ಅಧಿಕಾರಿಗಳು ನಗರ ಪ್ರದಕ್ಷಿಣೆ ಮಾಡಿ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ ತಡೆದರು. ಇದರಿಂದಾಗಿ ಪಿಬಿ ರಸ್ತೆ, ಅಶೋಕ ರಸ್ತೆ, ಹದಡಿ ರಸ್ತೆಗಳಲ್ಲಿ ವಾಹನ ಸವಾರರು ಪರದಾಡಿದರು.

    ಬೆಳಕು ಸರಿದರೂ ಕುಂದದ ಉತ್ಸಾಹ
    ರಸ್ತೆಗಳ ತುಂಬ ಜನವೋ ಜನ. ಕಣ್ಣು ಹಾಯಿಸಿದಷ್ಟೂ ದೂರ ಗಣೇಶನ ಭಕ್ತರ ಸಂಭ್ರಮ. ಬೆಳಗ್ಗೆ 11.30 ಕ್ಕೆ ಆರಂಭವಾದ ಈ ಸಡಗರ ಬೆಳಕು ಸರಿದು ಕತ್ತಲು ಆವರಿಸಿದರೂ ಕಡಿಮೆಯಾಗಲಿಲ್ಲ. ಹಾಡು, ಕುಣಿತಗಳು ನಿಲ್ಲಲೇ ಇಲ್ಲ. ಶೋಭಾಯಾತ್ರೆ ಪಿಬಿ ರಸ್ತೆಗೆ ಬಂದಾಗ ಜನ ಸಾಗರೋಪಾದಿಯಲ್ಲಿ ಸೇರಿದ್ದರು. ಡಿಜೆ ಸದ್ದಿನ ಜತೆಗೆ ದೀಪಗಳ ಬೆಳಕು ಆವರಿಸಿತ್ತು. ರಸ್ತೆ ವಿಭಜಕದ ಮೇಲೂ ಜನರು ನಿಂತಿದ್ದರು. ದಾವಣಗೆರೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಜನರೂ ಸೇರಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts